

ಮಳವಳ್ಳಿ: ಶಿಕ್ಷಕರು ಹಾಗೂ ಉಪನ್ಯಾಸಕರನ್ನು ತಾತ್ಸಾರದಿಂದ ನೋಡುವ ಪ್ರಸ್ತುತ ದಿನಗಳಲ್ಲಿ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಕಲಿಸಿದ ಗುರುಗಳು ನಿವೃತ್ತಿ ಹೊಂದಿದ ಸಂದರ್ಭ ಅವರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ವಿದ್ಯಾರ್ಥಿಗಳ ನಡೆ ನಿಜಕ್ಕೂ ಮಾದರಿ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾಪನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಪ್ರಶಂಸಿಸಿದರು.
ಪಟ್ಟಣದ ಶಾಂತಿ ಕಾಲೇಜಿನಲ್ಲಿ ಹಲವು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರೊ.ಜಿ.ವೇದಮೂರ್ತಿ ಹಾಗೂ ಡಾ.ಕೆ.ಎಂ.ಜಗನಾಥ್ ಅವರಿಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಪ್ರೊ.ಜಿ.ವೇದಮೂರ್ತಿ ಹಾಗೂ ಡಾ.ಕೆ.ಎಂ.ಜಗನ್ನಾಥ್ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ನಿವೃತ್ತ ಪ್ರಾಂಶುಪಾಲ ವೇದಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಪುಟ್ಟಸ್ವಾಮಿ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜ್, ಕಾಲೇಜಿನ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಅನಿತಾ, ನಿವೃತ್ತ ಪ್ರಾಂಶುಪಾಲ ಹತಾಉಲ್ಲ ಸಾಬ್, ಯೂನಿವರ್ಸಲ್ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಟಿ.ಎಂ.ಪ್ರಕಾಶ್ ಇತರರಿದ್ದರು.