

ಮಡಿಕೇರಿ: ಯಾವುದೇ ವೃತ್ತಿಯಲ್ಲಿ ಜ್ಞಾನಾರ್ಜನೆಯು ನಿರಂತರವಾಗಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಂ.ಭೃಂಗೇಶ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಡಿಕೇರಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಪ್ಯಾನಲ್ ವಕೀಲರುಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೊಸದಾಗಿ ವಕೀಲ ವೃತ್ತಿಯನ್ನು ಆರಂಭಿಸುವ ವಕೀಲರುಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಪ್ಯಾನಲ್ ವಕೀಲರಾಗಿ ನೇಮಕವಾಗುವುದು ಮತ್ತು ಉಚಿತ ವಕೀಲರಾಗಿ ಸೇವೆ ಸಲ್ಲಿಸುವುದು ಅವರುಗಳ ಭವಿಷ್ಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಅನುಭವ ಮತ್ತು ಯಶಸ್ಸು ಗಳಿಸಲು ಸಹಕಾರಿಯಾಗುತ್ತದೆ. ಯಾವುದೇ ವೃತ್ತಿಯಲ್ಲಿ ಜ್ಞಾನಾರ್ಜನೆಯು ನಿರಂತರವಾಗಿರಬೇಕು. ಆಗ ಮಾತ್ರ ವೃತ್ತಿಯಲ್ಲಿ ಘನತೆ ಮತ್ತು ಗೌರವ ಗಳಿಸಲು ಮತ್ತು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಮಾತಾನಾಡಿ, ಪ್ಯಾನಲ್ ವಕೀಲರುಗಳಿಗೆ ತರಬೇತಿ ಕಾರ್ಯಕ್ರಮ ಯುವ ವಕೀಲರುಗಳಿಗೆ ಉತ್ತಮ ಅವಕಾಶ ನೀಡುತ್ತದೆ. ಆ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಸರಿಯಾಗಿ ಬಳಸಿಕೊಂಡು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ವಕೀಲ ಎಂ.ಎ.ನಿರಂಜನ್ ಮಾತನಾಡಿ, ವಕೀಲ ವೃತ್ತಿಯ ಪ್ರಾರಂಭದಿಂದಲೇ ನ್ಯಾಯಾಂಗ ವ್ಯವಸ್ಥೆ ಘನತೆಯನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ವಕೀಲನು ಸಹ ಇಡೀ ವಕೀಲ ಸಮುದಾಯವನ್ನು ಪ್ರತಿನಿಧಿಸುವುದರಿಂದ ಯಾವ ವಕೀಲರು ಸಹ ನ್ಯಾಯಾಂಗ ವ್ಯವಸ್ಥೆಗೆ ಚ್ಯುತಿ ಬಾರದಂತೆ ಗೌರಯುತವಾಗಿ ನೆಡೆದುಕೊಳ್ಳಬೇಕು. ಸಮಾಜದ ನ್ಯಾಯ ವಂಚಿತ ಜನರಿಗೆ ತಮ್ಮ ಉಚಿತ ಕಾನೂನು ಸೇವೆಯು ಕಲ್ಪಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಹಾಜರಿದ್ದರು.