

ಸೊರಬ: ಚಂದ್ರಯಾನ-3 ಯಶಸ್ವಿಯಾಗಿದ್ದು, ಜಗತ್ತೇ ಭಾರದತ್ತ ತಿರುಗಿ ನೋಡುವಂತೆ ಇಸ್ರೋ ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ ಎಂದು ಸೊರಬ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಗುರುವಾರ ಪಟ್ಟಣದಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಯುವಾ ಬ್ರಿಗೇಡ್, ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡ ಚಂದ್ರಯಾನ-3 ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಮೂಲಕ ಚಂದ್ರಯಾನ-3 ಯೋಜನೆ ವಿಕ್ರಮ ಸಾಧಿಸಿದೆ. ಶತಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದೆ. ಸಾವಿರಾರು ವಿಜ್ಞಾನಿಗಳ ಶ್ರಮ ಸಾರ್ಥಕವಾಗಿದೆ. ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರವಾಗಿದ್ದು, ಈ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ದೇಶವು ಮತ್ತಷ್ಟು ಸಾಧನೆಯನ್ನು ಜಗತ್ತಿಗೆ ತೋರಿಸಿದಂತಾಗಿದೆ ಎಂದರು.
ಭಾರತೀಯ ಪರಂಪರೆಯಲ್ಲಿ ಪುರಾಣ ಹಾಗೂ ಐತಿಹಾಸಿಕವಾಗಿ ಚಂದ್ರಯಾನ ಹೊಸತಲ್ಲ. ಆರ್ಯಭಟನಂತಹ ಖಗೋಳ ಜ್ಞಾನಿಗಳು ಚಂದ್ರನ ದೂರವನ್ನು ಕಂಡು ಹಿಡಿದ್ದರು. ನಮ್ಮ ಜೋತಿಷ್ಯ ಶಾಸ್ತ್ರದಲ್ಲೂ ಚಂದ್ರನ ಚಲನವಲನಗಳ ಮೇಲೆ ಭವಿಷ್ಯ ಪಂಚಾಗವನ್ನು ಬರೆಯುವ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ, ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಚಂದ್ರಯಾನ-2 ವಿಫಲವಾದರೂ ಸಹ ಧೃತಿಗೆಡೆದೆ ವಿಜ್ಞಾನಿಗಳು ಚಂದ್ರಯಾನ-3ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ವಿಜ್ಞಾನಿಗಳು ಸಾಕಷ್ಟು ಸವಾಲುಗಳ ಎದುರಿಸಿ ತಮ್ಮ ತನವನ್ನು ಉಳಿಸಿಕೊಂಡು ವಿಶ್ವದ ಮುಂದೆ ಆದರ್ಶ ವಿಜ್ಞಾನಿಗಳಾಗಿ ಮೆರೆದಿದ್ದಾರೆ ಎಂದರು.
ಇದಕ್ಕೂ ಮೊದಲು ಶ್ರೀ ರಂಗನಾಥ ದೇವಸ್ಥಾನ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣದವರೆಗೆ ಸಂಭ್ರಮಾಚರಣೆ ಹಿನ್ನೆಲೆ ವಿಜಯೋತ್ಸವ ಜಾಥಾ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ. ನಾಗರಾಜ್ ವಹಿಸಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಸ್.ಕೃಷ್ಣಾನಂದ, ಪತ್ರಕರ್ತರ ಸಂಘದ ಎಸ್. ರಾಘವೇಂದ್ರ, ಯು.ಎಲ್. ಸಂದೀಪ್, ಯುವ ಬ್ರಿಗೇಡ್ ತಾಲೂಕು ಸಂಚಾಲಕ ಮಹೇಶ್ ಖಾರ್ವಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಬಿ.ಕೆ.ಚೇತನಕ್ಕ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಲಯನ್ಸ್ ಕ್ಲಬ್‌ನ ಎಚ್.ಎಂ.ಪ್ರತಿಮಾ, ಸವಿತಾ ಭಟ್, ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಮುಖರಾದ ನಾಗರಾಜ ಗುತ್ತಿ, ಲಕ್ಷ್ಮೀ ಮುರಳೀಧರ್, ಪಾಣಿರಾಜಪ್ಪ, ಜಿ.ಕೆರಿಯಪ್ಪ, ಡಿ.ಶಿವಯೋಗಿ, ಸುಧೀರ್ ಪೈ, ಸುಬ್ರಹ್ಮಣ್ಯ ಗುಡಿಗಾರ್, ಅಶೋಕ್ ನಾಯ್ಕ ಅಂಡಿಗೆ, ಕೇಶವ ಪೇಟ್ಕರ್ ಇತರರಿದ್ದರು.