

ಪುತ್ತೂರು: ಗ್ರಾಮ ಪಂಚಾಯಿತಿ ಹಾಗೂ ನಗರಸಭೆಯ ನಕಲಿ ದಾಖಲೆ ಸಿದ್ಧಪಡಿಸಿ ನೀಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ಕಬಕ ಗ್ರಾಮದ ಪೆರುವತ್ತೋಡಿ ನಿವಾಸಿ ವಿಶ್ವನಾಥ(40) ಎಂಬಾತನನ್ನು ಪುತ್ತೂರು ನಗರ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲು ಎಂ.ಎಸ್.ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಬಿ.ಬಿ ಇಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಅಂಗಡಿಯಲ್ಲಿ ವಿಶ್ವನಾಥ ನಕಲಿ ದಾಖಲೆ ಸಿದ್ಧಪಡಿಸುತ್ತಿದ್ದು, ದಂಧೆ ನಡೆಸುತ್ತಿದ್ದ ಕಾಲಾವಧಿ, ವಸ್ತುಗಳನ್ನು ಪೂರೈಸುತ್ತಿದ್ದವರು, ಶಾಮೀಲಾಗಿರುವವರ ಬಗ್ಗೆ ತನಿಖೆ ನಡೆಯುತ್ತಿದೆ.
ನಕಲಿ ದಾಖಲೆಗಳಿಗೆ ಪಾವತಿಸಬೇಕಾಗಿದ್ದ ಹಣವನ್ನು ಇಲಾಖೆಗೆ ಪಾವತಿ ಮಾಡಲಾಗುತ್ತಿತ್ತಾದರೆ, ಪ್ರಕರಣದಲ್ಲಿ ಅಧಿಕಾರಿಗಳ ಕೈವಾಡ ಇರಲೇಬೇಕಾಗುತ್ತದೆ. ಆದರೆ ಗ್ರಾಪಂ, ನಗರಸಭೆ ವ್ಯಾಪ್ತಿಯಲ್ಲಿ ಯಾವುದು ನಕಲಿ? ಯಾವುದು ಅಸಲಿ? ಎಂಬುದನ್ನು ಪತ್ತೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿದೆ.
ನಕಲಿ ದಾಖಲೆಯನ್ನು ಯಾರಿಗೆ ತಯಾರಿಸಿ ನೀಡಿದ್ದಾರೆ ಎಂಬ ಬಗ್ಗೆ ಹೆಚ್ಚಿನ ತನಿಖೆಯನ್ನು ಇಲಾಖೆ ಕೈಗೊಂಡಿದೆ. ಆರೋಪಿ ಎಷ್ಟು ವರ್ಷದಿಂದ ಯಾವ ತರಹದ ದಾಖಲೆಗಳನ್ನು ಸಿದ್ಧಪಡಿಸಿ ನೀಡುತ್ತಿದ್ದ ಎಂಬ ಬಗ್ಗೆಯೂ ವಿಚಾರ ನಡೆಸಲಾಗುತ್ತಿದೆ. ಕನಿಷ್ಠ ಎರಡು ದಿನದ ವಿಚಾರಣೆ ಬಳಿಕ ಮಾತ್ರ ಮಾಹಿತಿ ನೀಡಲು ಸಾಧ್ಯ. -ರಿಷ್ಯಂತ್, ಎಸ್‌ಪಿ, ದ.ಕ.