ಸರಗಳವು ಮಾಡುತ್ತಿದ್ದ ಆರೋಪಿ ವಶಕ್ಕೆ

Published on

ಮೈಸೂರು: ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸರ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು, 3.9 ಲಕ್ಷ ರೂ.ಮೌಲ್ಯದ 56 ಗ್ರಾಂ ತೂಕದ ಎರಡು ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ನಗರ ಮೂಲದ ಲತಾ ಸಿಕ್ಕಿ ಬಿದ್ದ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣ ನಡೆದಿತ್ತು. ಪ್ರಕರಣ ಹೆಚ್ಚಾಗಿದ್ದರಿಂದ ಆರೋಪಿಯ ಬಂಧನಕ್ಕೆ ಲಷ್ಕರ್ ಠಾಣೆ ಪೊಲೀಸರು ತಂಡ ರಚಿಸಿದ್ದರು.

ಗಸ್ತಿನಲ್ಲಿದ್ದ ತಂಡ ಡಿ.3ರಂದು ಬಸ್ ನಿಲ್ದಾಣದಲ್ಲಿ ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಿಚಾರಣೆ ನಡೆಸಿದಾಗ ಮಾಂಗಲ್ಯ ಸರಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಲಷ್ಕರ್ ಪೊಲೀಸ್ ಠಾಣೆಯ 2 ಪ್ರಕಣಗಳಿಗೆ ಸಂಬಂಧಪಟ್ಟಂತೆ ಆರೋಪಿಯಿಂದ 56 ಗ್ರಾಂ ತೂಕದ ಎರಡು ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net