ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರ ಗುಂಡು

crime
Published on

ಹುಬ್ಬಳ್ಳಿ: ನವನಗರ ಎಪಿಎಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಧರಿಸಲು ಕಾರಣನಾದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಸದ್ದಾಂ ಹುಸೇನ್, ತಪ್ಪಿಸಿಕೊಳ್ಳು ಪ್ರಯತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡು ಹೊಡೆದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತೆ ಮನವೊಲಿಸಿ ಅತ್ಯಾಚಾರ ಎಸಗಿದ್ದಲ್ಲದೇ ಕುಟುಂಬಸ್ಥರ ಮೇಲೆ ಸದ್ದಾಂಹುಸೇನ್, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದ. ಬಾಲಕಿ ಆಸ್ಪತ್ರೆ ಹೋದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ಆರೋಪಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧನ ಪ್ರಕ್ರಿಯೆಗೆ ರಾತ್ರಿ ಸುತಗಟ್ಟಿ ಗ್ರಾಮಕ್ಕೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆ ವೇಳೆ ಪೊಲೀಸರು ಅವನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ದಾಂನನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಕಿಮ್ಸ್‌ಗೆ ರವಾನಿಸಲಾಗಿದೆ.
ಆರೋಪಿಯ ಬೆರಳಚ್ಚು, ಓಡಾಡಿದ ಜಾಗ, ವೈದ್ಯಕೀಯ ಪರೀಕ್ಷೆ ಹಾಗೂ ಇತರ ಮಾಹಿತಿ ಸಂಗ್ರಹಿಸಬೇಕಾಗಿತ್ತು. ಈ ಪ್ರಕ್ರಿಯೆಗೆ ಪೊಲೀಸರು ರಾತ್ರಿ 12.10ಕ್ಕೆ ಸುತಗಟ್ಟಿ ಗ್ರಾಮಕ್ಕೆ ತೆರಳಿದಾಗ ಅವನು, ಪೊಲೀಸರಿಗೆ ಬಟನ್ ಚಾಕು ತೋರಿಸಿ, ಹಲ್ಲೆ ನಡೆಸಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಂಗಮೇಶ ದಿಡಗನಾಳ, ಸಿಬ್ಬಂದಿ ಅರುಣ್ ಅವರ ಕಾಲಿಗೆ ಗಾಯವಾಗಿದೆ. ತಕ್ಷಣ ಸಂಗಮೇಶ ಅವರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಮತ್ತೊಂದು ಗುಂಡನ್ನು ಆರೋಪಿ ಎಡಗಾಲಿಗೆ ಹೊಡೆದಿದ್ದಾರೆ ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net