

ಮೈಸೂರು: ಯಾವುದೇ ಆರೋಪ ಹೊತ್ತವರು ಪ್ರಾಮಾಣಿಕರಾಗಿದ್ದರೆ ತನಿಖೆ ಎದುರಿಸಬೇಕೇ ಹೊರತು ರಾಜ್ಯಪಾಲರಿಗೆ ಅಗೌರವ ತೋರುವ ಕೆಲಸ ಮಾಡಬಾರದು ಎಂದು ಪದ್ಮಭೂಷಣ ಪುರಸ್ಕೃತರೂ ಆದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದರು.
ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶನಿವಾರ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್‌ಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಯಾವುದೇ ಸರ್ಕಾರ ಸಮರ್ಥವಾಗಿ ಎದುರಿಸಬೇಕು. ಅದನ್ನು ಬಿಟ್ಟು ರಾಜ್ಯಪಾಲರ ಹುದ್ದೆಗೆ ಅಗೌರವ ತೋರಿಸಬಾರದರು ಎಂದು ಇತ್ತೀಚಿನ ಹಗರಣಗಳ ಕುರಿತು (ಬ್ರಿಟನ್‌ನಲ್ಲಿ ನಡೆದ ದೃಷ್ಟಾಂತವೊಂದನ್ನು ಹೇಳುವ ಮೂಲಕ) ಪರೋಕ್ಷವಾಗಿ ಖಂಡಿಸಿದರು.
ರಾಜ್ಯಪಾಲರ ಹುದ್ದೆ ಪರಮೋಚ್ಚವಾದ ಸಂವಿಧಾನಿಕ ಹುದ್ದೆ. ಕಾಲಾನಂತರ ಇದು ಗಂಡಾಂತರಕಾರಿ ಸ್ಥಾನವಾಗಿ ಪರಿಣಮಿಸಿದೆ. ಸ್ವ್ವಾತಂತ್ರ್ಯಾನಂತರ ಎಲ್ಲ ರಾಜ್ಯದಲ್ಲಿಯೂ ನೆಹರು ಕಾಂಗ್ರೆಸ್ ಅಸ್ಥಿತ್ವದಲ್ಲಿತ್ತು. ಆಗ ಈ ಹುದ್ದೆ ಪಡೆದವರು ಆರಾಮವಾಗಿ ನಿರ್ವಹಣೆ ಮಾಡುತ್ತಿದ್ದರು. ನಂತರ ವಿರೋಧಪಕ್ಷಗಳು ಹುಟ್ಟಿಕೊಂಡು ರಾಜ್ಯಪಾಲರು ತಮ್ಮನ್ನು ನೇಮಕ ಮಾಡಿದ ಪಕ್ಷದ ಪರವಾಗಿ ಹಾಗೂ ವಿರೋಧ ಪಕ್ಷದ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಾರೆ ಎಂಬ ಆಪಾದನೆ ಶುರುವಾದವು. ಆಗ ರಾಜ್ಯಪಾಲರು ಭ್ರಷ್ಟಾಚಾರ ತಡೆಯಲು ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಯಿತು ಎಂದರು.