

ಸಿಂಧನೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಿನ್ನೆಲೆ ಅರಿತು ಬಿಜೆಪಿ ಹೇಳಿಕೆ ನೀಡಬೇಕೇ ಹೊರತು ರಾಜಕೀಯ ದುರುದ್ದೇಶವಿಟ್ಟುಕೊಂಡು ಹುರುಳಿಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದ್ದಾರೆ.
ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ, ಬೆಳವಣಿಗೆ ಆಗಲ್ಲ. ಒಂದಿಲ್ಲೊಂದು ಅರ್ಥವಿಲ್ಲದ ಹೇಳಿಕೆ ನೀಡುವ ಮೂಲಕ ನಾಯಕರ ವ್ಯಕ್ತಿತ್ವದ ತೇಜೋವಧೆ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಸಚಿವರಾಗಿ ಈ ಭಾಗಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಜಾರಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇಂಥವರ ವಿರುದ್ಧ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಹೇಳಿಕೆ ನೀಡುವ ಮುಂಚೆ ಪೂರ್ವಾಪರ ತಿಳಿದುಕೊಳ್ಳುವುದನ್ನು ಬಿಜೆಪಿಯವರು ಕಲಿಯಬೇಕೆಂದು ತಿಳಿಸಿದ್ದಾರೆ.