ವಿಜಯವಾಣಿ ಸುದ್ದಿಜಾಲ ಹಾಸನ
ಅರಸೀಕೆರೆ ತಾಲೂಕಿನ ಅರೆಕೆರೆ ಗ್ರಾಮದ ಬಳಿ ಶುಕ್ರವಾರ ಸಂಜೆ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಬೇಲೂರು ತಾಲೂಕು ಕರಗಟ್ಟ ಗ್ರಾಮದ ಮಂಜು (29) ಮೃತ. ಶೆಟ್ಟಿಗೆರೆ ಗ್ರಾಮದ ನಾಗೇಶ್ (40) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ಇಬ್ಬರೂ ಕೆಲಸ ಮುಗಿಸಿಕೊಂಡು ಜಾವಗಲ್‌ನಿಂದ ಬಾಣಾವರ ಮಾರ್ಗವಾಗಿ ಬರುತ್ತಿದ್ದಾಗ ಮುಂದೆ ಹೊರಟಿದ್ದ ಹತ್ತು ಚಕ್ರದ ಲಾರಿಯನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಲಾರಿಯ ಚಕ್ರಕ್ಕೆ ಸಿಲುಕಿದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಎಸ್‌ಐ ಅರುಣ್‌ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಜಾವಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.