

ಮೈಸೂರು/ಭೇರ್ಯ: ಕರೊನಾ ಲಾಕ್ಡೌನ್ನಿಂದ ಪ್ರಸ್ತಕ ಸಾಲಿನ ಶೈಕ್ಷಣಿಕ ವರ್ಷ ತಡವಾಗಿ ಪ್ರಾರಂಭವಾಯಿತು. ಈ ಹಿನ್ನೆಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷವನ್ನು ಜುಲೈ 15ರಿಂದ ಪ್ರಾರಂಭಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ, ಕಾಳಮ್ಮನಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯ 60 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿಷಯಾಧಾರಿತ ಟ್ಯಾಬ್ ವಿತರಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಾಮಾನ್ಯವಾಗಿ ಮೇ ಕೊನೇ ಅಥವಾ ಜೂನ್ ಮೊದಲ ವಾರ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಈ ಬಾರಿ ಸ್ವಲ್ಪ ತಡವಾಗಬಹುದು. ಬೇಸಿಗೆ ರಜೆ ಅವಧಿ ಕಡಿತ ಕುರಿತು ಇನ್ನೂ ಯಾವುದೇ ಚಿಂತನೆ ನಡೆಸಿಲ್ಲ ಎಂದರು. ಜುಲೈ 15ರಿಂದ ಶಾಲೆ ಪ್ರಾರಂಭಿಸಿದರೂ ಸೇತುಬಂಧ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಎಂದು ಹೇಳಿದರು.
ಮಕ್ಕಳು ಗುಂಪಾಗಿ ಸೇರಬಾರದೆಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭಿಸಲು ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಮಕ್ಕಳಿಗೆ ಚೈತನ್ಯ ಬರಲು ಬಿಸಿಯೂಟ ಅವಶ್ಯಕತೆ ಇದ್ದು, ಪ್ರಾರಂಭಕ್ಕೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. 5ನೇ ತರಗತಿಯಿಂದ ರೆಗ್ಯುಲರ್ ಕ್ಲಾಸ್ ಪ್ರಾರಂಭಿಸಿ ಎಂಬ ಒತ್ತಡ ಕೇಳಿ ಬರುತ್ತಿದ್ದು, ಮಂಗಳವಾರ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು. ಸದ್ಯದಲ್ಲಿಯೇ 8ನೇ ತರಗತಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.