

ಗೋಣಿಕೊಪ್ಪ: ಕಳೆದ ಎರಡು ವರ್ಷಗಳ ಹಿಂದೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗೋಣಿಕೊಪ್ಪ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿ ರಾಜೇಶ ಬಂಧಿತ. 2022ರ ಫೆ.7ರಂದು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪ್ರೇಮಾ ಮತ್ತು ತಂಗಿ ವೀಣಾ ಅವರ ತಲೆ, ಕುತ್ತಿಗೆ, ದೇಹದ ಭಾಗಗಳಿಗೆ ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಪ್ರೇಮಾ ಅವರು ಕೊಲೆಯಾಗಿದ್ದರು. ವೀಣಾ ತೀವ್ರವಾಗಿ ಗಾಯಗೊಂಡಿದ್ದರು.
ಆಸ್ತಿಯ ವಿಚಾರದಲ್ಲಿ ಕುಟುಂಬದವರೇ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸುತ್ತಿದ್ದರು. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾ ದೃಶ್ಯಾವಳಿಯನ್ನು ಪರಿಶೀಲಿಸಲಾಗಿ, ಕೊಲೆಯಾದ ಪ್ರೇಮಾ ಅವರ ಗಂಡ ಸೋಮಶೇಖರ್ ಅವರ ಅಕ್ಕನ ಮಗ ರಾಜೇಶ್ ಸ್ಥಳದಲ್ಲಿ ಓಡಾಡಿರುವುದು ಸೆರೆಯಾಗಿತ್ತು. ಅದನ್ನು ಆಧರಿಸಿ ತಲೆಮರೆಸಿಕೊಂಡಿದ್ದ ರಾಜೇಶನನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದಿನ ಕೊಡಗು ಜಿಲ್ಲಾ ಎಸ್ಪಿ ಕ್ಷಮಾ ಮಿಶ್ರಾ ಅವರ ನಿರ್ದೆಶನದಂತೆ ವಿರಾಜಪೇಟೆ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತದ ವೃತ್ತ ನಿರೀಕ್ಷಕ ಸಿ.ಎ ಮಂಜಪ್ಪ, ಶ್ರೀಮಂಗಲ ಪೊಲೀಸ್ ಠಾಣೆ ಪಿಎಸ್‌ಐ ರವಿಶಂಕರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು.