ಕಾಶ್ಮೀರದಲ್ಲಿನ ದಾಳಿಗೆ ಆರ್ಟಿಕಲ್ 370 ತೆರವು ಕಾರಣ

SRP_22-ramesha bandisiddegoda-06
Published on

ಶ್ರೀರಂಗಪಟ್ಟಣ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಖಂಡನೀಯ. ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವು ಮಾಡಿದ್ದೇ ಪ್ರಮುಖ ಕಾರಣ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಆರೋಪಿಸಿದರು.

ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮನಸ್ಥಿತಿಯನ್ನು ಅರಿತು ಆಡಳಿತ ಮಾಡಬೇಕಿದೆ. ಆದರೆ, ಯಾವುದೇ ಪೂರ್ವಪರ ಯೋಚಿಸದೆ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಷಾ ಅವರ ಅತಿಯಾದ ಆತ್ಮವಿಶ್ವಾಸಕ್ಕೆ ಈ ವಿಧ್ವಂಸಕ ಕೃತ್ಯದ ಮೂಲಕ ಉತ್ತರ ನೀಡಲಾಗಿದೆ ಎನ್ನುವಂತಾಗಿದೆ. ಭಾರತದಲ್ಲಿ ನಾವು ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದ್ದು, ಯಾವುದೇ ರೀತಿಯ ಒತ್ತಡಕ್ಕೆ ಮಣಿಯದಂತೆ ಕಾರ್ಯನಿರ್ವಹಿಸಲು ದೇಶದಲ್ಲಿ ಕಠಿಣವಾದ ಕಾನೂನು ಜಾರಿಯಾಗಬೇಕಿದೆ. ಕಾಶ್ಮೀರದಲ್ಲಿನ ದಾಳಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಕಾರಣವಾಗಿದೆ. ಘಟನೆಗೆ ನರೇಂದ್ರ ಮೋದಿ ಹಾಗೂ ಅಮಿತ್ ಷಾ ನೇತೃತ್ವದ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಜಾತಿ ಜನಗಣತಿ ಅವಶ್ಯಕವಾಗಿದ್ದು, ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.

10 ವರ್ಷಗಳ ಹಿಂದೆ ನಡೆಸಲಾಗಿರುವ ಜಾತಿ ಜನಗಣತಿಯ ಕಾಲಘಟ್ಟ ಬೇರೆ ಇದ್ದೂ, ಇಂದಿನ ಪರಿಸ್ಥಿತಿಯೇ ಬೇರೆಯಾಗಿದೆ. ಆದರೆ ರಾಜ್ಯದ ಮಾಧ್ಯಮಗಳಲ್ಲಿ ಈ ಸರ್ಕಾರ ವಿವಿಧ ಜಾತಿಗಳ ವಿರೋಧಿ ಎಂದು ಬಿಂಬಿಸುವ ಮೂಲಕ ಜನರ ಮನಸ್ಥಿತಿಯನ್ನು ಕೆಡಿಸುವಂತೆ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಚರ್ಚೆಗಳು ಎಂದೂ ಅಂತಿಮವಲ್ಲ. ರಾಜಕಾರಣಿಗಳು ಹಾಗೂ ಸರ್ಕಾರದ ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ಅವಶ್ಯಕವಲ್ಲದ ವಿಷಯ ಪ್ರಸ್ತಾಪಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದನ್ನು ನಿಲ್ಲಿಸಬೇಕು ಎಂದು ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net