ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ನಾಳೆ ಸಾಕಾರ

yuva nidhi
ಯುವನಿಧಿ ಪ್ರಾರಂಭೋತ್ಸವದ ಮುನ್ನ ದಿನವಾದ ಗುರುವಾರ ಕಾರ್ಯಕ್ರಮದ ವೇದಿಕೆ ಬಳಿ ಸಮಾವೇಶಗೊಂಡಿದ್ದ ಪೊಲೀಸ್ ಸಿಬ್ಬಂದಿ.
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಯಾದ ಯುವನಿಧಿಯ ಪ್ರಾರಂಭಕ್ಕೆ ಶಿವಮೊಗ್ಗ ಸಜ್ಜಾಗಿದೆ. ಜ.12ರಂದು ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮ ಈಗಾಗಲೇ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಶಕ್ತಿಕೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಭರ್ಜರಿ ಕಾರ್ಯಕ್ರಮ ನಡೆಸುತ್ತಿದೆ.

ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆದ ಬಳಿಕವೂ ಶಿವಮೊಗ್ಗದಲ್ಲಿ ಇಷ್ಟು ದೊಡ್ಡ ಮಟ್ಟದ ಸರ್ಕಾರಿ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ. ಇದೀಗ ಗ್ಯಾರಂಟಿ ಯೋಜನೆಯನ್ನೇ ಶಿವಮೊಗ್ಗದಲ್ಲಿ ಆಯೋಜಿಸುವ ಮೂಲಕ ಪ್ರತಿಪಕ್ಷ ಬಿಜೆಪಿ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸುವ ತವಕ ಕಾಂಗ್ರೆಸ್ ನಾಯಕರದ್ದು.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯ ಯುವನಿಧಿಯೊಂದಿಗೆ ಭರ್ಜರಿ ಎಂಟ್ರ ನೀಡುತ್ತಿದ್ದಾರೆ. ಕಳೆದ 15 ದಿನಗಳಿಂದ ಕಾರ್ಯಕ್ರಮದ ಆಯೋಜನೆಗೆ ಜಿಲ್ಲಾಡಳಿತ ಇನ್ನಿಲ್ಲದ ಶ್ರಮ ವಹಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಮೂರ‌್ನಾಲ್ಕು ದಿನಗಳಿಂದ ಶಿವಮೊಗ್ಗದಲ್ಲೇ ಇದ್ದು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಯುವನಿಧಿ ಪ್ರಾರಂಭೋತ್ಸವಕ್ಕೆ ಭರ್ಜರಿ ವೇದಿಕೆ ಸಿದ್ಧವಾಗಿದೆ. 85 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಡೀ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ.
ಭರ್ಜರಿ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಭಾಷಣ ಕೇಳಲು ಜಿಲ್ಲೆಯ ಪ್ರತಿ ಗ್ರಾಪಂನಿಂದಲೂ ಜನರು ಆಗಮಿಸಲು ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11.30ರೊಳಗೆ ಫಲಾನುಭವಿಗಳು ಹಾಗೂ ಸಾರ್ವಜನಿಕರು ವೇದಿಕೆ ಎದುರು ಆಸೀನರಾಗಬೇಕು. ಮಧ್ಯಾಹ್ನ 12.30ರಿಂದ 2.30ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮ, ಅದರಲ್ಲೂ ಗ್ಯಾರಂಟಿಯ ಅನುಷ್ಠಾನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಇದರಿಂದ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಆ ಪಕ್ಷದಲ್ಲಿದೆ. ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿದ್ದ ಸಚಿವ ಮಧು ಬಂಗಾರಪ್ಪ ಒತ್ತಾಯದ ಮೇರೆಗೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಯುವನಿಧಿ ಪ್ರಾರಂಭೋತ್ಸವ ಕಾಂಗ್ರೆಸ್ ಸಂಘಟನೆಗೆ ಯಾವ ರೀತಿ ಅನುಕೂಲವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್:ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿವೆ. ನಗರ ಪಾಲಿಕೆ, ಜಿಪಂ, ತಾಪಂ ಟಿಕೆಟ್ ಆಕಾಂಕ್ಷಿಗಳು ಕೂಡ ಫ್ಲೆಕ್ಸ್‌ನಲ್ಲಿ ಮಿಂಚುತ್ತಿದ್ದಾರೆ. ಬಹುತೇಕ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವೊಂದರ ಆಯೋಜನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಸಕ್ತಿ ವಹಿಸಿ ಕೈಜೋಡಿಸಿ ವ್ಯಾಪಕ ಪ್ರಚಾರ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ.
ವ್ಯಾಪಕ ಭದ್ರತೆ: ಸಾವಿರಾರು ಮಂದಿ ಯುವನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವ್ಯಾಪಕ ಭದ್ರತೆ ಒದಗಿಸಲಾಗುತ್ತಿದೆ. ಸುಗಮ ಸಂಚಾರ ವ್ಯವಸ್ಥೆ, ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಎಡಿಜಿಪಿ ಹಂತದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾ ಹೂಡಿದ್ದಾರೆ. ನೆರೆ ಜಿಲ್ಲೆಗಳಿಂದಲೂ ಎಸ್ಪಿ, ಎಎಸ್ಪಿ, ಸಿಪಿಐ, ಡಿವೈಎಸ್‌ಪಿ ಹಂತದ ಅಧಿಕಾರಿಗಳನ್ನು ಶಿವಮೊಗ್ಗದಲ್ಲಿ ನಿಯೋಜನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net