ಸಂಭ್ರಮದಿಂದ ನಡೆದ ಶಂಭುನಾಥ ಶ್ರೀಗಳ 46ನೇ ವರ್ಧಂತ್ಯುತ್ಸವ

12_HSN_03
Published on

ಹಾಸನ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರ 46ನೇ ವರ್ಧಂತ್ಯುತ್ಸವವನ್ನು ಶ್ರೀ ಮಠದ ಸದ್ಭಕ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ವರ್ಧಂತ್ಯುತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆಯಿಂದಲೇ ಶ್ರೀಮಠದ ಆವರಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾಗಣಪತಿ ದೇವಸ್ಥಾನ ಹಾಗೂ ಯಾಗ ಮಂಟಪದಲ್ಲಿ ವಿಶೇಷ ಹೋಮ ಹಾಗೂ ಷೋಡಶೋಪಚಾರ ಪೂಜಾ ಕಾರ್ಯಕ್ರಮ ಜರುಗಿದವು. ಸಂಜೆ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಕ್ತರು ಕೇಕ್ ಕತ್ತರಿಸಿ ಸ್ವಾಮೀಜಿಯವರಿಗೆ ಶುಭಾಶಯ ತಿಳಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶಗೌಡ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆದರ್ಶಗಳನ್ನು ಸಮಾಜಕ್ಕೆ ಬಿತ್ತುತ್ತ ನೊಂದವರಿಗೆ ನೆರಳಾಗಿ ಮುನ್ನಡೆಯುತ್ತಿರುವ ಶ್ರೀ ಶಂಭುನಾಥ ಶ್ರೀಗಳು ಇತರರಿಗೆ ಮಾದರಿ. ಬಾಲಗಂಗಾಧರನಾಥ ಸ್ವಾಮೀಜಿಯವರು ಶ್ರೀ ರಾಮನಾದರೆ, ಶಂಭುನಾಥ ಶ್ರೀಗಳು ಹನುಮಂತನಂತೆ ಎಂದು ಶ್ರೀಗಳ ಗುಣಗಾನ ಮಾಡಿದ ಅವರು, ಶ್ರೀ ಶಂಭುನಾಥ ಶ್ರೀಗಳು ಹಾಸನ ಹಾಗೂ ಕೊಡಗು ಮಠದ ನೇತೃತ್ವ ವಹಿಸಿಕೊಂಡ ಮೇಲೆ ಈ ಭಾಗದಲ್ಲಿ ಸಮುದಾಯವನ್ನು ಒಗ್ಗೂಡಿಸುವುದರ ಜತೆ ಜತೆಗೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಮಠವನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ. ಮಿತ ಭಾಷಿಯಾಗಿ, ಹಸನ್ಮುಖಿಯಾಗಿ ಭಕ್ತ ಗಣಕ್ಕೆ ಸನ್ಮಾರ್ಗವನ್ನು ತೋರುತ್ತಿದ್ದಾರೆ ಎಂದು ತಿಳಿಸಿದರು.

ಶಂಭುನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುವ ಗುರು ತೋರಿದ ತಿಂಗಳ ಮಾಮನ ತೇರು ಕೇವಲ ಹೆಸರಲ್ಲ. ಅದು ಧಾರ್ಮಿಕ ಕೈಂಕರ್ಯಗಳಲ್ಲಿ ಎಲ್ಲರನ್ನೂ ಕರೆದೊಯ್ಯುವ ವಿಶೇಷ ಕಾರ್ಯಕ್ರಮ. ಯಾವ ಕ್ಷಣಕ್ಕೂ ನಾವು ನಂಬಿದ ಗುರು ಕೈ ಬಿಡಲ್ಲ ಎಂಬ ವಿಶ್ವಾಸದಲ್ಲಿ ಕೆಲಸ ಮಾಡುತ್ತಾರೆ. ಹೂ ಎತ್ತಿದಷ್ಟೇ ಸರಳವಾಗಿ ಎಲ್ಲ ಕೆಲಸ ಇವರ ನೇತೃತ್ವದಲ್ಲಿ ಆಗುತ್ತದೆ. ಅಂತಹ ಶ್ರದ್ಧೆ, ಭಕ್ತಿಯನ್ನು ಇಟ್ಟುಕೊಂಡು ಸುಮಾರು 36 ಶಿಕ್ಷಣ ಸಂಸ್ಥೆಗಳನ್ನು ತಮ್ಮ ಮಾರ್ಗದರ್ಶನದಲ್ಲಿ ಮುಂದುವರೆಸುತ್ತಿದ್ದು, ಶಿಕ್ಷಣ ಸಂಸ್ಥೆಗಳನ್ನು ಬೆಳೆಸುತ್ತಿರುವ ಮಾದರಿ ಮೆಚ್ಚುವಂತಹುದು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಬಸವೇಶ್ವರ ಚೈತನ್ಯ ಸ್ವಾಮೀಜಿ, ರುದ್ರಮುನಿ ಶ್ರೀ, ಶಿರದನಹಳ್ಳಿ ಮಠದ ಸದಾಶಿವ ಸ್ವಾಮೀಜಿ, ತುಳಸಿಗೆರೆ ರಮಾನಂದನಾಥ ಸ್ವಾಮೀಜಿ, ಶ್ರೀ ಕೈಲಾಸನಂದನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಹರಿಹರಪುರ ಶ್ರೀಧರ್, ಎಚ್.ಎಂ. ಸುರೇಶಕುಮಾರ್, ಚ.ನ. ಅಶೋಕ್, ಎಚ್.ಟಿ. ಕಿರಣ್, ಜಯದೇವ, ಜೆ.ಆರ್. ಕೆಂಚೇಗೌಡ, ಸತೀಶ್ ಕುಮಾರ್, ಬಿಜಿಎಸ್ ಸಹಕಾರ ಸಂಘದ ಅಧ್ಯಕ್ಷ ಮಧುಸೂದನ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net