ನ.೨೪ರಂದು ೧೦೦ನೇ ಪುಸ್ತಕವನ್ನು ಲೋಕಾರ್ಪಣೆ

logo
Published on

ಸಾಮಾಜಿಕ ಕಳಕಳಿಯೊಂದಿಗೆ ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆ ನ.೨೪ರಂದು ದಾಖಲೆಯ ೧೦೦ನೇ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದೆ ಎಂದು ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ೧೦೦ನೇ ಮೊಟ್ಟ್ ಪುಸ್ತಕದ ಸಂಪಾದಕ ಪುತ್ತರೀರ ಕರುಣ್ ಕಾಳಯ್ಯ ತಿಳಿಸಿದರು.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ೧೦೦ನೇ ಮೊಟ್ಟ್ ಪುಸ್ತಕದೊಂದಿಗೆ ಕೊಡವ ಮಕ್ಕಡ ಕೂಟದ ೧೦೧ನೇ ಪುಸ್ತಕ ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ ಬರದಿರುವ ಮನಸ್‌ರ ಮರೆಲ್, ೧೦೨ನೇ ಪುಸ್ತಕ ಪೇರಿಯಂಡ ಯಶೋಧ ರಚಿಸಿರುವ ಮನಸ್‌ರ ಜರಿ ೧೦೩ನೇ ಕರವಂಡ ಸೀಮಾ ಗಣಪತಿ ಬರೆದಿರುವ ಮನಸ್‌ರ ತಕ್ಕ್ ಹಾಗೂ ೧೦೪ನೇ ಪುಸ್ತಕವಾಗಿ ಐಚಂಡ ರಶ್ಮಿ ಮೇದಪ್ಪ ರಚಿಸಿರುವ ಕೊಡವಡ ನಮ್ಮೆನಾಳ್ (ನಾಟಕ ರೂಪತ್‌ಲ್) ಕೂಡ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

೧೦೦ನೇ ಮೊಟ್ಟ್ ಕೊಡವ ಮಕ್ಕಡ ಕೂಟದ ಮಹತ್ವಾಕಾಂಕ್ಷೆಯ ಪುಸ್ತಕವಾಗಿದ್ದು, ಕೊಡವ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ೪೫ ಕ್ಕೂ ಹೆಚ್ಚು ಲೇಖನಗಳಿವೆ. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ದೇವನೆಲೆ, ಐನ್‌ಮನೆ, ಮಂದ್, ಪ್ರಕೃತಿ, ಕೊಡವ ಪದ್ಧತಿ ಸೇರಿದಂತೆ ಅನೇಕ ವಿಚಾರಗಳು ಒಳಗೊಂಡಿವೆ. ಕಥೆ, ಕವನ ಮತ್ತು ಹಾಸ್ಯ ಬರಹಗಳು ಕೂಡ ಇವೆ. ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ಬರಹಗಾರರ ರಚನೆಗಳು ೧೦೦ನೇ ಮೊಟ್ಟ್ ಪುಸ್ತಕದಲ್ಲಿ ಅಡಕವಾಗಿದೆ.

ಭಾನುವಾರ ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ ಅವರು ಉದ್ಘಾಟಿಸಿ ೧೦೦ನೇ ಮೊಟ್ಟ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಹಾಗೂ ಸಾಮಾಜಿಕ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ, ಅತಿಥಿಗಳಾಗಿ ಬರಹಗಾರರಾದ ತೆನ್ನೀರ ಟೀನಾ ಚಂಗಪ್ಪ, ಪೇರಿಯಂಡ ಯಶೋಧ, ಕರವಂಡ ಸೀಮಾ ಗಣಪತಿ ಹಾಗೂ ಐಚಂಡ ರಶ್ಮಿ ಮೇದಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಕರುಣ್ ಕಾಳಯ್ಯ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net