

ತಾವರಗೇರಾ: ಸಮೀಪದ ಮೆಣೇಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಮಂಗಳವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಇದರಿಂದ ಮಕ್ಕಳು ಶಾಲಾವರಣದಲ್ಲೇ ಕುಳಿತು ತರಗತಿಗೆ ಹಾಜರಾಗಬೇಕಾಯಿತು.
ಇರುವ ಇಬ್ಬರು ಶಿಕ್ಷಕಿಯರಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕಿ, ಇನ್ನೊಬ್ಬರು ಸಹ ಶಿಕ್ಷಕಿ ಇದ್ದಾರೆ. ಸಿದ್ದಾಪೂರದ ಹಿ.ಪ್ರಾ. ಶಾಲೆಯ ಶಿಕ್ಷಕರೊಬ್ಬರಿಗೆ ಪ್ರಭಾರ ಮುಖ್ಯಶಿಕ್ಷಕ ಜವಾಬ್ದಾರಿ ವಹಿಸಲಾಗಿತ್ತು. ಈಗ ಅವರೂ ಬರುತ್ತಿಲ್ಲ. ಹೀಗಾಗಿ ಇಬ್ಬರೇ ಶಿಕ್ಷಕರಿಂದ 256ಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಪ್ರವಚನ ಕಷ್ಟವಾಗಿದೆ. ಇದರಿಂದ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಲಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಶಿಕ್ಷಕರ ನೇಮಕವಾಗಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕನೋಲಪ್ಪ, ಸದಸ್ಯರಾದ ಶಿವಮೂರ್ತಿ, ಅಮರೇಶ, ಕನಕಪ್ಪ ಗೊರಲೂಟಿ, ಶಕುಂತಲಾ, ಪಾರ್ವತಿ, ಕನಕಪ್ಪ, ಅಪ್ಪಯ್ಯ, ಹಸೇನಮ್ಮ, ಸುವರ್ಣಾ ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಶಿಕ್ಷಕ ಕೊರತೆ ವಿಷಯ ಗಮನಕ್ಕಿದೆ. ಜೂ.15ರಂದು ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳುವಂತೆ ಇಲಾಖೆ ಸೂಚನೆ ಇದೆ. ಆ ಪ್ರಕಾರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮೆಣೇಧಾಳ ಶಾಲೆಗೆ ನಿಯೋಜಿಸಲಾಗುವುದು.ಸುರೇಂದ್ರ ಕಾಂಬಳೆ ಬಿಇಒ, ಕುಷ್ಟಗಿ ನಮ್ಮೂರ ಶಾಲೆಗೆ ಶಿಕ್ಷಕರ ಕೊರತೆ ತಪ್ಪದಾಗಿದೆ. 11 ಶಿಕ್ಷಕ ಸ್ಥಾನದಲ್ಲಿ ಇಬ್ಬರೇ ಇದ್ದಾರೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಶೀಘ್ರವೇ ಅಗತ್ಯ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು.ಕನೋಲಪ್ಪ, ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿ.ಪ್ರಾ. ಶಾಲೆ ಮೆಣೆಧಾಳ