

ತಾವರಗೇರಾ: ಸಮೀಪದ ಕಳಮಳ್ಳಿ ಗ್ರಾಮದಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ನಾಲ್ಕು ಮಣ್ಣಿನ ಮನೆಗಳು ಬಿದ್ದು, ಮನೆಗಳಲ್ಲಿರುವ ರೈತಾಪಿ ಜನರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಕಿಡದೂರ, ನವಲಹಳ್ಳಿ, ಬಚನಾಳ ಗ್ರಾಮಗಳಲ್ಲೂ ಮನೆಗಳು ಬಿದ್ದಿವೆ. ಯಾವುದೇ ಜೀವ ಹಾನಿಯಾಗಿಲ್ಲ. ಕಳಮಳ್ಳಿ ಗ್ರಾಮದ ನಿರುಪಾದೆಪ್ಪ ಕನಕಪ್ಪ ವಾಲೇಕಾರ, ಶರಣಪ್ಪ ವಾಲೇಕಾರ, ಬಸವರಾಜಪ್ಪ ಶರಣಪ್ಪ ಕಳಮಳ್ಳಿ, ಹನಮಪ್ಪ ಯಮನಪ್ಪ ಕಳಮಳ್ಳಿ ಈ ರೈತರ ಮನೆಗಳು ಬಿದ್ದಿದ್ದು, ಕಂದಾಯ ಇಲಾಖೆ ಅಧಿಕಾರಿ ಸೂರ್ಯಕಾಂತ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪಂಚನಾಮೆ ಮಾಡಿದ್ದು , ಒಟ್ಟು ಹಾನಿಯಾದ ವಿವರಗಳನ್ನು ಸರ್ಕಾರಕ್ಕೆ ಕಳಿಸಿರುವುದಾಗಿ ಹೇಳಿದರು.
ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವವರು ಮುನ್ನೆಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ, ಗುಡುಗು-ಸಿಡಿಲು ಅಪ್ಪಳಿಸುವ ಸಂದರ್ಭಗಳಲ್ಲಿ ರೈತರು ಜಮೀನುಗಳಲ್ಲಿದ್ದರೆ, ಎತ್ತರದ ಪ್ರದೇಶದಲ್ಲಿ, ಗಿಡ-ಮರಗಳ ಕೆಳಗೆ ನಿಲ್ಲಬಾರದು. ಬದಲಿಗೆ ತಗ್ಗು ಪ್ರದೇಶ, ಸುರಕ್ಷಿತ ಸ್ಥಳಗಳಲ್ಲಿರಬೇಕು. ಎಂದು ಕೃಷಿ ಇಲಾಖೆ ಅಧಿಕಾರಿ ಆಶಾ ರಾಠೋಡ್ ತಿಳಿಸಿದ್ದಾರೆ.