ಬಾಲ್ಯದ ಆ ಆಟ ಆ ಹುಡುಗಾಟ

That game of childhood, that boyhood
Published on

ಮಡಿಕೇರಿ:

’ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ…’ ಇದು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನವೆಂಬರ್‌ನಲ್ಲಿ ರಾಜ್ಯಾದ್ಯಂತ ಮಕ್ಕಳಿಗಾಗಿ ಆಯೋಜಿಸಿದ್ದ ವಿಶೇಷ ಅಭಿಯಾನ. ಉತ್ತಮ ಅಂಕ ಗಳಿಸುವುದೊಂದೇ ಗುರಿ ಎನ್ನುವ ಈಗಿನ ಶಿಕ್ಷಣ ಪದ್ಧತಿ ಮತ್ತು ಈ ನಿಟ್ಟಿನಲ್ಲಿ ಪೋಷಕರ ಒತ್ತಡದ ಮಧ್ಯೆ ಅಮೂಲ್ಯ ಬಾಲ್ಯವನ್ನು ಸಂಭ್ರಮಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇಂದಿನ ಮಕ್ಕಳು ಇದ್ದಾರೆ. ಇವರಿಗೆ ಒಂದಿಷ್ಟು ಬಾಲ್ಯದ ಆಟಗಳ ಅನುಭವ ಮೂಡಿಸುವ ಉದ್ದೇಶದಿಂದ ನಡೆಸಲಾದ ಅಭಿಯಾನ ಪುಟಾಣಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

೮೦ರ ದಶಕಕ್ಕಿಂತ ಮೊದಲಿನ ಮಕ್ಕಳು ಅನುಭವಿಸಿದ ಬಾಲ್ಯದ ರಸ ನಿಮಿಷಗಳನ್ನು ಸಂಭ್ರವಿಸುವ ಅವಕಾಶ ನಂತರದ ತಲೆಮಾರಿನ ಮಕ್ಕಳಿಗೆ ಸಿಕ್ಕಿರುವುದು ಬಹು ಅಪರೂಪ. ಕೆಲವೊಂದು ಅಪವಾದಗಳನ್ನು ಹೊರತುಪಡಿಸಿದರೆ ಟಿವಿ ಕ್ರಾಂತಿ ಆನಂತರದ ಮೊಬೈಲ್ ಕ್ರೇಜ್ ಮಕ್ಕಳನ್ನು ಮನೆಯೊಳಗೆ ಬಂಧಿ ಮಾಡಿಬಿಟ್ಟಿದೆ. ಹೆಚ್ಚು ಅಂಕ ಗಳಿಸಿದರೆ ಮಾತ್ರ ಉದ್ಯೋಗ, ರ‌್ಯಾಂಕ್ ಬಂದರೆ ಮಾತ್ರ ಒಳ್ಳೆಯ ಜೀವನ ಎನ್ನುವ ಪೋಷಕರ ಮನೋಭಾವ ಮಕ್ಕಳನ್ನು ಬಾವಿಯೊಳಗಿನ ಕಪ್ಪೆಯಂತೆ ಮಾಡಿರುವುದೇ ಹೆಚ್ಚು. ’ಮಕ್ಕಳು ಪ್ರಕೃತಿಯೊಂದಿಗೆ ಆಡುತ್ತಾ ಬೆಳೆಯಬೇಕು,’ ಎನ್ನುವ ಹಿರಿಯರ ಮಾತಿಗೆ ಎಲ್ಲೂ ಮನ್ನಣೆ ಸಿಗುತ್ತಿಲ್ಲ. ನದಿಯಲ್ಲಿ ಬಿದ್ದು ಕಲಿಯುವ ಈಜು, ಮೀನುಗಳನ್ನು ಹಿಡಿಯುತ್ತಾ ಮಾಡುತ್ತಿದ್ದ ಮೋಜು, ಮರದಿಂದ ಮರಕ್ಕೆ ನೆಗೆದು ಆಡುತ್ತಿದ್ದ ಮಂಗಾಟ, ಅಜ್ಜಿ ಮನೆಯಲ್ಲಿ ರಜೆ ಕಳೆಯುವ ಸುಖ, ಎದ್ದು, ಬಿದ್ದು ಕಲಿಯುತ್ತಿದ್ದ ಸೈಕಲ್ ಎಲ್ಲವೂ ಈಗಿನ ತಲೆಮಾರಿನ ಮಕ್ಕಳಿಗೆ ಕತೆಯಂತೆ ಕಂಡುಬಂದರೆ ಅಚ್ಚರಿ ಇಲ್ಲ.

ಓದಿನ ಹಿಂದೆ ಬಿದ್ದು ಬಾಲ್ಯದ ಆಟಗಳ ಸವಿಯಿಂದ ವಂಚಿತರಾಗುತ್ತಿರುವ ನವ ತಲೆಮಾರಿನ ಮಕ್ಕಳಿಗೆ ’ಹೀಗೂ ಒಂದು ಕಾಲ ಇತ್ತು,’ ’ಇಂಥ ಆಟಗಳೂ ಇದ್ದವು,’ ಎನ್ನುವುದರ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಅವರ ಕ್ರಿಯಾಶೀಲತೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯಾದ್ಯಂತ ನವೆಂಬರ್-೨೦೨೩ರಲ್ಲಿ ’ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ’, ಎನ್ನುವ ಅಭಿಯಾನ ಯಶಸ್ವಿಯಾಗಿ ನಡೆಸಿದೆ.

ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ’ಓದುವ ಬೆಳಕು’ ಕಾರ್ಯಕ್ರಮ ಈಗಾಗಲೇ ಅನುಷ್ಠಾನದಲ್ಲಿದೆ. ಈ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳನ್ನು, ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಮತ್ತು ನಿರಂತರತೆಯನ್ನು ಕಾಪಾಡುವ ಗುರಿ ಹೊಂದಲಾಗಿದೆ. ಅರಿವು ಕೇಂದ್ರಗಳನ್ನು ಗ್ರಾಮೀಣ ಜ್ಞಾನ ಕೇಂದ್ರಗಳನ್ನಾಗಿಸಲು ಗ್ರಂಥಾಲಯಗಳ ನವೀಕರಣ, ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಇದರ ಮುಂದುವರಿದ ಭಾಗವಾಗಿ ’ಓದುವ ಬೆಳಕು’ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಲ್ಲಿ ಹಲವಾರು ಅಭಿಯಾನಗಳ ಮೂಲಕ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಯನ್ನು ಆಯೋಜಿಸಲಾಗುತ್ತಿರುತ್ತದೆ.

ನ. ೧೪ ಮಕ್ಕಳ ದಿನವಾಗಿರುವುದರಿಂದ ಅರಿವು ಕೇಂದ್ರಗಳಿಗೆ ಭೇಟಿ ನೀಡುವ ಮಕ್ಕಳಲ್ಲಿ ಬಾಲ್ಯವನ್ನು ಸಂಭ್ರಮಿಸಲು ಹಾಗೂ ಒಟ್ಟಿಗೆ ಬೆಳೆಯುವ ಅವಕಾಶವನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ’ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ’ ಅಭಿಯಾನ ರೂಪಿಸಿತ್ತು. ಈ ಅಭಿಯಾನದ ಅಂಗವಾಗಿ ಪಂಚಾಯಿತಿ ಮಟ್ಟದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳ ಕ್ರೀಯಾಶೀಲತೆ ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ.

ಅಭಿಯಾನದಲ್ಲಿ ನಿಧಿ ಹುಡುಕಲು ಹೋಗೋಣ ಎನ್ನುವ ಚಟುವಟಿಕೆ ಮೂಲಕ ಈ ಅಭಿಯಾನದ ಬಗ್ಗೆ ಮಕ್ಕಳಿಗೆ ತಿಳಿಸುವುದು, ಅರಿವು ಕೇಂದ್ರಗಳಿಗೆ ಭೇಟಿ ನೀಡುವ ಮಕ್ಕಳಿಗೆ ವಿಜ್ಞಾನ ಪುಸ್ತಕ, ಬೇರೆ ಭಾಷೆಯ ಪುಸ್ತಕ, ಪ್ರಾಣಿಯ ಬಗ್ಗೆ ಪುಸ್ತಕ, ಒಬ್ಬ ರಾಷ್ಟ್ರೀಯ ನಾಯಕನ ಬಗ್ಗೆ ಪುಸ್ತಕ, ಮತ್ತೊಂದು ದೇಶದ ಬಗ್ಗೆ ಪುಸ್ತಕ, ನೆಚ್ಚಿನ ಲೇಖಕರ ಪುಸ್ತಕ, ಶೀರ್ಷಿಕೆಯಲ್ಲಿ ಕೇವಲ ಒಂದು ಪದವನ್ನು ಹೊಂದಿರುವ ಪುಸ್ತಕ, ಸೂಪರ್ ಹೀರೋ ಅಥವಾ ಹೀರೋಯಿನ್ ಬಗೆಗಿನ ಪುಸ್ತಕ, ಐದು ಅಧ್ಯಾಯಗಳಿಗಿಂತ ಹೆಚ್ಚು ಇರುವ ಪುಸ್ತಕ ಹುಡುಕಲು ಹೇಳಿ ಆ ಪುಸ್ತಕದ ಹೆಸರು, ಲೇಖಕರ ಹೆಸರು ಹಾಗೂ ಪುಸ್ತಕದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿತ್ತು.

ಮಕ್ಕಳು ಬಾಲ್ಯವನ್ನು ಮುಖ್ಯ ವಿಷಯವಾಗಿ ಇಟ್ಟುಕೊಂಡು ಕಲಾತ್ಮಕ ಬುಕ್ ಮಾರ್ಕ್ ಮಾಡುವುದು ಮತ್ತು ಅವುಗಳ ಮೇಲೆ ಅಭಿಯಾನದ ಶೀರ್ಷಿಕೆ ಬರೆಯುವ ’ಬುಕ್ ಮಾರ್ಕ್ ತಯಾರಿಸುವ’ ಚಟುವಟಿಕೆ, ಒಂದು ಬಟ್ಟಲು ಅಥವಾ ಇತರ ಧಾರಕದಲ್ಲಿ, ವಿವಿಧ ವಿಷಯಗಳನ್ನು ಬರೆದಿರುವ ಮೀನುಗಳ ಕಟೌಟುಗಳನ್ನು ಇರಿಸಿ, ಮಕ್ಕಳು ಒಂದು ಮೀನನ್ನು ಎತ್ತಿಕೊಂಡು ಆ ವಿಷಯದ ಬಗ್ಗೆ ೧ ನಿಮಿಷ ಮಾತನಾಡುವ ’ಮೀನು ಹಿಡಿಯಿರಿ’ ಎನ್ನುವ ಚಟುವಟಿಕೆ, ಪ್ರತಿಯೊಂದು ಮಕ್ಕಳಿಗೆ ಅವರ ಇಷ್ಟ ಮತ್ತು ಇಷ್ಟವಿಲ್ಲದ ವಿವರಗಳನ್ನು ಒಂದು ಕಾಗದದ ಮೇಲೆ ಬರೆಯಲು ಹೇಳಿ ಆ ಕಾಗದಗಳನ್ನು ಒಟ್ಟುಗೂಡಿಸಿ ಮತ್ತು ಅಭಿರುಚಿಗಳನ್ನು ಒಂದೊಂದಾಗಿ ಜೋರಾಗಿ ಓದಿ ಅದು ಯಾವ ಮಗು ಎಂದು ಮಕ್ಕಳಿಗೆ ಊಹಿಸಲು ಅನುವು ಮಾಡಿಕೊಡುವುದು, ಮಕ್ಕಳು ಊಹಿಸಿದವರ ಹೆಸರುಗಳನ್ನು ಹೇಳುವ ’ಯಾರೆಂದು ಊಹಿಸಿ’ ಚಟುವಟಿಕೆ, ಕಡಲತೀರದ ದೃಶ್ಯ, ಮಾರುಕಟ್ಟೆ, ಜಾತ್ರೆ, ಆಟದ ಮೈದಾನ ಮತ್ತು ಮಕ್ಕಳು ಆನಂದಿಸುವ ಇತರ ಸ್ಥಳಗಳಂತಹ ವರ್ಣರಂಜಿತ ಚಿತ್ರಗಳನ್ನು ಮುದ್ರಿಸಿ, ಮಕ್ಕಳು ಚಿತ್ರವನ್ನು ತೆಗೆದುಕೊಂಡು ಅದನ್ನು ತಮ್ಮ ಸ್ನೇಹಿತರಿಗೆ ವಿವರಿಸುವ ಅಥವಾ ಆ ದೃಶ್ಯದ ಬಗ್ಗೆ ಒಂದು ಕಥೆಯನ್ನು ಬರೆಯುವ ’ಚಿತ್ರ ಚರ್ಚೆ’ ಚಟುವಟಿಕೆಗಳನ್ನೂ ನಡೆಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಎಲ್ಲಾ ಪಂಚಾಯಿತಿಗಳಲ್ಲೂ ನಡೆಸಲಾದ ಈ ಚಟುವಟಿಕೆಗಳು ಮಕ್ಕಳ ಕ್ರಿಯಾಶೀಲತೆಗೆ ಚುರುಕುಮುಟ್ಟಿಸುವಲ್ಲಿ ಯಶಸ್ವಿಯಾಯಿತು. ಪಠ್ಯದ ಏಕತಾನತೆಯಿಂದ ಬಳಲುತ್ತಿದ್ದ ಮಕ್ಕಳು ಈ ಅಭಿಯಾನದ ಮೂಲಕ ಕಲಿಕೆಯ ಹೊಸ ಸಾಧ್ಯತೆಯ ಪರಿಚಯವೂ ಆದಂತಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಡೆಸಲಾದ ’ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ…’ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದೊಂದು ಉತ್ತಮ ಕಾರ್ಯಕ್ರಮ. ನ.೧೪ರ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಡೆಸಲಾದ ಈ ಅಭಿಯಾನದಲ್ಲಿ ನಮ್ಮ ವ್ಯಾಪ್ತಿಯ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಿರಿಯ ಅಧಿಕಾರಿಗಳು, ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ನಮ್ಮಲ್ಲಿ ಯಶಸ್ವಿಯಾಗಿ ಅಭಿಯಾನ ನಡೆಸಲಾಯಿತು.
ಎಂ.ಆರ್. ಸುಮೇಶ್, ಗುಡ್ಡಹೊಸೂರು ಗ್ರಾ,.ಪಂ. ಪಿಡಿಒ

’ಬಾಲ್ಯವನ್ನು ಆನಂದಿಸಿ, ಬೆಳೆಯುತ್ತಾ ಸಾಗಿ…’ ಎನ್ನುವ ಹೆಸರು ಕೇಳಿ ಕುತೂಹಲದಿಂದಲೇ ಪಂಚಾಯಿತಿಗೆ ತೆರಳಿದ್ದೆವು. ಅಲ್ಲಿ ನಮಗೆ ನಡೆಸಿದ ಚಟುವಟಿಕೆಗಳು ಖುಷಿ ಕೊಟ್ಟಿತು. ಸಾಕಷ್ಟು ಕಲಿಕೆಗೂ ಅವಕಾಶ ಮಾಡಿಕೊಟ್ಟಿತು. ’ಮೀನು ಹಿಡಿಯಿರಿ’ ಎನ್ನುವ ಚಟುವಟಿಕೆ ತುಂಬಾ ಇಷ್ಟ ಆಯಿತು. ಕೆಲವೊಂದು ಪುಸ್ತಕಗಳ ಬಗ್ಗೆಯೂ ಮಾಹಿತಿ ತಿಳಿದುಕೊಂಡೆವು. ಇದೊಂದು ಒಳ್ಳೆಯ ಕಾರ್ಯಕ್ರಮ ಆಗಿತ್ತು.
ಅನುಷಾ, ೭ನೇ ತರಗತಿ ವಿದ್ಯಾರ್ಥಿನಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗುಡ್ಡೆಹೊಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net