ಸಂಸದನಾಗಿದ್ದ ಆ ನಟ ಸಂಸತ್ತಲ್ಲಿ ಐದು ವರ್ಷ ಮಾತನಾಡಿರಲೇ ಇಲ್ಲ: ಪ್ರಲ್ಹಾದ್ ಜೋಶಿ ಹೀಗಂದಿದ್ದು ಯಾರಿಗೆ?

Joshi
Published on

ಧಾರವಾಡ: ಸಂಸದನಾಗಿದ್ದ ಆ ನಟ ಸಂಸತ್​ನಲ್ಲಿ ಐದು ವರ್ಷ ಮಾತನಾಡಿರಲೇ ಇಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುತೂಹಲ ಕೆರಳಿಸಿದ್ದಾರೆ. ಆ ಸಂಸದ ಯಾರು ಎಂಬ ಬಗ್ಗೆ ಅವರು ಬಾಯಿಬಿಟ್ಟು ಹೇಳಿರದೇ ಇದ್ದರೂ, ಪ್ರಲ್ಹಾದ ಜೋಶಿ ಹಾಗೂ ಮಂಡ್ಯ ರಮೇಶ್ ಅವರ ಈ ಮಾತುಗಳು ಅವರು ಯಾರು ಎಂಬ ಸುಳಿವನ್ನು ನೀಡುವಂತಿವೆ.

ಧಾರವಾಡದಲ್ಲಿ ಆಯೋಜಿಸಲಾಗಿದ್ದ ರಂಗಾಯಣದ ರಂಗ ನವಮಿ ನಾಟಕೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ ಈ ರೀತಿಯಾಗಿ ಮಾತನಾಡಿ, ಸಭೆಯಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಸಿದರು. ಮಾತಿನ ಮಧ್ಯೆ ಖ್ಯಾತ ನಟರೊಬ್ಬರನ್ನು ಉಲ್ಲೇಖಿಸಿ ಮಾತನಾಡಿದ ಅವರು ಅಲ್ಲಿ ನೆರೆದಿದ್ದವರ ತಲೆಗೆ ಒಂದಷ್ಟು ಕಾಲ ಹುಳಬಿಟ್ಟರು.

ಈ ಹಿಂದೆ ನಮ್ಮಲ್ಲಿ ಒಬ್ಬರು ಖ್ಯಾತ ಚಲನಚಿತ್ರ ನಟರು ಎಂಪಿ ಆಗಿದ್ದರು, ಆದರೆ ಅವರು ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಬಾಯಿ ತೆರೆಯಲೇ ಇಲ್ಲ. ಸಿನಿಮಾದಲ್ಲಿ ಡೈಲಾಗ್ ಹೊಡಿತೀರಾ? ಇಲ್ಲೇನಾಗಿದೆ? ಅಂತ ನಾನೊಮ್ಮೆ ಕೇಳಿದ್ದಕ್ಕೆ ಅವರು, ನಮಗೆ ಏನಾದರೂ ಹೇಳಬೇಕಾದರೆ ಹಿಂದೆ ಡೈರೆಕ್ಟರ್ ಹೇಳಬೇಕಲ್ಲ ಎಂದಿದ್ದರು. ಆ ನಟ ಯಾರು ಎಂದು ನಾನು ಹೆಸರು ಹೇಳುವುದಿಲ್ಲ ಎಂದು ಜೋಶಿ ಹೇಳುತ್ತಿದ್ದಂತೆ, ಅಲ್ಲಿದ್ದ ಮಂಡ್ಯ ರಮೇಶ್​ ಅವರು ನಮ್ಮೂರವರೇ ಬಿಡಿ ಎಂದರು. ಮುಂದುವರಿದ ರಮೇಶ್​, ಅವರು ನಮ್ಮೂರವರೇ, ಆದರೆ ಅವರು ಈಗ ಇಲ್ಲ ಎಂದರು. ತದನಂತರ ಮಾತು ಮುಂದುವರಿಸಿದ ಪ್ರಲ್ಹಾದ ಜೋಶಿ, ಬಹಳ ಜನ ನಟರು ಎಂಪಿಗಳಾಗಿ ಹೋಗಿದ್ದಾರೆ ಬಿಡಿ. ಈಗಲೂ ಕೆಲವರು ಇದ್ದಾರೆ. ಆದರೂ ನಾನು ಹೆಸರು ಹೇಳುವುದಿಲ್ಲ ಎಂದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net