

ಉಡುಪಿ; ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಈಗಾಗಲೇ 5 ವಿಶ್ವ ದಾಖಲೆಗಳನ್ನು ಮಾಡಿದ್ದು, ಫೆ.6ರಂದು ಸಾಯಂಕಾಲ 4.30ಕ್ಕೆ ಸೇಂಟ್ ಸಿಸಿಲಿಸ್ ಸಮೂಹ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ‘ಮೋಸ್ಟ್ ಬ್ಯಾಕ್‌ವರ್ಡ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್’ 6ನೇ ವಿಶ್ವದಾಖಲೆಗಾಗಿ ಸಜ್ಜಾಗಿದ್ದಾರೆ.
11 ವರ್ಷದ ತನುಶ್ರೀ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ದಾಖಲೀಕರಣ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಭಾರತೀಯ ಪ್ರತಿನಿಧಿ ಮನೀಷ್ ಭಾಗವಹಿಸಲಿದ್ದಾರೆ ಎಂದು ತನುಶ್ರೀ ತಂದೆ ಉದಯಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದರು. 2018ರಲ್ಲಿ ಎದೆಭಾಗವನ್ನು ಸ್ಥಿರವಿರಿಸಿ ದೇಹದ ಉಳಿದ ಭಾಗವನ್ನು ಚಲನೆಗೊಳಿಸುವ ನಿರಾಲಂಬ ಪೂರ್ಣ ಚಕ್ರಾಸನ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದರು. 2019ರಲ್ಲಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ (62) ಧನುರಾಸನ ಹಾಕಿ ದಾಖಲೆ ಬರೆದಿದ್ದರು. 2020ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 1.14 ನಿಮಿಷದಲ್ಲಿ ಅತಿ ವೇಗವಾಗಿ 100 ಬಾರಿ ಉರುಳಿ ಮತ್ತೊಂದು ದಾಖಲೆ ಮಾಡಿದ್ದರು ಎಂದರು.
ತನುಶ್ರೀ ಪಿತ್ರೋಡಿ, ಸುರಭಿ ರತನ್ ಪಿತ್ರೋಡಿ, ವಿಜಯ ಕೋಟ್ಯಾನ್, ರವೀಂದ್ರ ಶೇರಿಗಾರ್ ಸುದ್ದಿಗೋಷ್ಠಿಯಲ್ಲಿದ್ದರು.