

ಮಂಗಳೂರು: ಹಣದ ವಿಚಾರಕ್ಕೆ ಸಂಬಂಧಿಸಿ ಸಹೋದ್ಯೋಗಿಯೊಬ್ಬರಿಗೆ ಕಬ್ಬಿಣದ ಉಳಿಯಿಂದ ಚುಚ್ಚಿ ಕೊಲೆ ಗೈದಿರುವ ಘಟನೆ ತಣ್ಣೀರುಬಾವಿ ಟ್ರಿ ಪಾರ್ಕ್ ಸಮೀಪದ ಮಂಗಳಾ ಶಿಪ್ಪಿಂಗ್ ಯಾರ್ಡ್ ಬಳಿ ಶನಿವಾರ ರಾತ್ರಿ ನಡೆದಿದೆ. ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಲ್ಲಂ ನಿವಾಸಿ ಬಿನು( 41) ಕೊಲೆಗೀಡಾದವರು, ಕೇರಳ ತಲ್ಲಿಪರಂಬ ನಿವಾಸಿ ಜಾನ್ಸನ್ ಯಾನೆ ಬಿನೋಯ್ (52) ಕೊಲೆಗೈದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಜಾನ್ಸನ್ ಯಾನೆ ಬಿನೋಯ್ ಮತ್ತು ಬಿನು ತಣ್ಣೀರುಬಾವಿಯ ಟ್ರೀ ಪಾರ್ಕ್ ಸಮೀಪದ ಮಂಗಳಾ ಶಿಪ್ಪಿಂಗ್ ಯಾರ್ಡ್ ನಲ್ಲಿ ದೋಣಿ ತಯಾರಿಕೆಯ ಕೆಲಸ ಮಾಡುತ್ತಿದ್ದರು. ಇವರ ಮಧ್ಯೆ ಹಣಕಾಸಿನ ವಿಚಾರವಾಗಿ ಶನಿವಾರ ರಾತ್ರಿ ಗಲಾಟೆ ನಡೆದಿತ್ತು. ಇಬ್ಬರೂ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುತ್ತಿದ್ದರು. ಬಿನ್ನು ಊಟ ಮಾಡಿ ಮಲಗಿದ್ದರು. ಮದ್ಯ ಸೇವಿಸಿ ಬಂದಿದ್ದ ಜಾನ್ಸನ್ ಗಲಾಟೆಯ ವೈಷಮ್ಯದಿಂದ ಕಬ್ಬಿಣದ ಉಳಿಯಿಂದ ಹೊಟ್ಟೆಯ ಪಾರ್ಶ್ವಕ್ಕೆ ಚುಚ್ಚಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಬಿನು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪಣಂಬೂರು ಪೊಲೀಸರು ಶನಿವಾರ ರಾತ್ರಿ ಗಲಾಟೆ ನಡೆದಿದ್ದ ಮಾಹಿತಿ ಕಲೆಹಾಕಿ ಜಾನ್ಸನ್ ಯಾನೆ ಬಿನೋಯ್ ನನ್ನುವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಯು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ಬಂಧಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.