ಜಿಲ್ಲಾಧಿಕಾರಿಗೆ ಕಸಾಪ ಧನ್ಯವಾದ

Thanks to the Collector
Published on

ಮಡಿಕೇರಿ:

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಜಿಲ್ಲಾಧ್ಯಕ್ಷ ಎಂ. ಪಿ ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಕನ್ನಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕ ಫಲಕಗಳಲ್ಲಿ ಕನ್ನಡ ಪ್ರಮುಖ ಸ್ಥಾನದಲ್ಲಿರಬೇಕು ಮತ್ತು ಶೇ. 60ರಷ್ಟು ಭಾಗ ಕನ್ನಡದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರಕ್ಕೂ ಅದನ್ನು ಕೊಡಗು ಜಿಲ್ಲೆಯಲ್ಲಿ ಅಳವಡಿಸಲು ಆದೇಶಿಸಿರುವ ಜಿಲ್ಲಾಧಿಕಾರಿ ವೆಂಕಟರಾಜಾ ರವರನ್ನು ಅಭಿನಂದಿಸಿ ಪತ್ರ ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಚುನಾವಣೆ ಮತ್ತು ಶಾಲೆಗಳಿಗೆ ರಜದ ಕಾರಣ ಉಳಿದು ಹೋಗಿರುವ ದತ್ತಿ ಕಾರ್ಯಕ್ರಮವನ್ನು ಮುಂದಿನ ತಿಂಗಳು 15 ರ ಒಳಗಾಗಿ ಮಾಡಬೇಕು ಅಲ್ಲದೇ 2024 - 25ರ ನೂತನ ದತ್ತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ. ಎಲ್ಲ ಜಿಲ್ಲಾ ತಾಲೂಕು ಮತ್ತು ಹೋಬಳಿ ಸಮಿತಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಜಿಲ್ಲಾಧ್ಯಕ್ಷ ಎಂ. ಪಿ. ಕೇಶವ ಕಾಮತ್ ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ವತಿಯಿಂದ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆ ತಾಲೂಕು ಮತ್ತು ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಭಾವಚಿತ್ರ ಮತ್ತು ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದ್ದು ಕೂಡಲೇ ಅದಕ್ಕೆ ಬೇಕಾದ ಭಾವಚಿತ್ರ ಅರ್ಜಿ ನೀಡಬೇಕೆಂದು ಕೋರಿದರು.

ಇದೇ ಸಂದರ್ಭ ಜಿಲ್ಲಾ ಕಾರ್ಯ ಸಮಿತಿ ಸದಸ್ಯೆ ಹಂಚೇಟಿರ ಫ್ಯಾನ್ಸಿ ಮುತ್ತಣ್ಣ ತಮ್ಮ ಅತ್ತೆ ಮಾವ ಹೆಸರಿನಲ್ಲಿ ಐವತ್ತು ಸಾವಿರ ರೂಪಾಯಿಗಳ ದತ್ತಿ ಸ್ಥಾಪನೆ ಮಾಡುವುದಾಗಿ ಘೋಷಿಸಿದರು. ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್. ಐ ಮುನಿರ್ ಅಹಮದ್, ರೇವತಿ ರಮೇಶ್, ಜಿಲ್ಲಾ ಗೌರವ ಕೋಶಾಧಿಕಾರಿ ಎಸ್. ಎಸ್ ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಪಿ ಚಂದ್ರಶೇಖರ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೆ ರ ತುಳಸಿ ಮೋಹನ್, ಸಂಪಾಜೆ ಹೋಬಳಿ ಅಧ್ಯಕ್ಷ ಗೋಪಾಲ್ ಪೆರಾಜೆ, ಮುರ್ನಾಡು ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net