ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ

ramalinga reddy
Published on

ಸಚಿವ ರಾಮಲಿಂಗಾರೆಡ್ಡಿ ಅಭಿಮತ


ವಿಜಯವಾಣಿ ಸುದ್ದಿಜಾಲ ಆನೇಕಲ್
ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಚಂದಾಪುರದಲ್ಲಿ ಆನೇಕಲ್ ಕ್ಷೇತ್ರದ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಿಂಗಳಲ್ಲೇ ಗ್ಯಾರಂಟಿ ಅನುಷ್ಠಾನ ಮಾಡಿದೆ ಎಂದರು.
ಆನೇಕಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ಸುಸಜ್ಜಿತ ರಸ್ತೆ, ಬಡವರಿಗೆ ಸೂರು, ಮೆಟ್ರೋ ರೈಲು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿಗಾಗಿ 106 ಕೋಟಿ ರೂ. ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದರು.
ಶಕ್ತಿ ಯೋಜನೆಯಡಿ ಇದುವರೆಗೆ 9.96 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಕರ್ನಾಟಕದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಅಡಿಯಲ್ಲಿ 1.56 ಲಕ್ಷ ಟ್ರಿಪ್‌ಗಳು ಒಂದು ದಿನದಲ್ಲಿ ಬಸ್‌ಗಳು ಸಂಚರಿಸುತ್ತವೆ. ಪ್ರತಿನಿತ್ಯ ಸಂಚರಿಸುವ ಟ್ರಿಪ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಬೊಮ್ಮಸಂದ್ರವರೆಗೆ ಮೆಟ್ರೋ ಯೋಜನೆ ಜಾರಿಯಾಗಿದೆ. ಮುಂದಿನ ದಿನಗಳಲ್ಲಿ ಅತ್ತಿಬೆಲೆ, ಆನೇಕಲ್ ಜಿಗಣಿವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗುವುದು ಎಂದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಶ್ರೀಮಂತರ ಪರವಾಗಿದೆ. ಅಂಬಾನಿ, ಅದಾನಿ ಅವರಂತಹ ಕೋಟ್ಯಂತರ ರೂ. ಸಾಲ ಮನ್ನಾ ಮಾಡುವ ಸರ್ಕಾರ, ಬಡವರಿಗೆ ಅಕ್ಕಿ ನೀಡುವ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಪರ್ಯಾಸ ಎಂದರು.
ಬಮುಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಐ.ಸೋಮಶೇಖರರೆಡ್ಡಿ, ಮುಖಂಡರಾದ ಟಾಟ್ ನಾಗರಾಜು, ಕೆ.ಸಿ.ರಾಮಚಂದ್ರ, ಗಟ್ಟಹಳ್ಳಿ ಸೀನಪ್ಪ, ಎನ್.ಬಿ.ಐ.ನಾಗರಾಜು, ಸ್ವಾತೇಗೌಡ, ಮುನಿವೀರಪ್ಪ, ಪುರುಷೋತ್ತಮರೆಡ್ಡಿ, ಸಿಡಿ ಹೊಸಕೋಟೆ ಚಿನ್ನಪ್ಪ, ಶ್ರೀನಿವಾಸ್, ನಾಗವೇಣಿ, ಪುಷ್ಪರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net