

ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಸಲಾಯಿತು.
ಒಟ್ಟು 16 ಸದಸ್ಯ ಬಲದಲ್ಲಿ ಎಂಟು ಸದಸ್ಯರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶಂಕ್ರವ್ವ ಮಾದರ, ಉಪಾಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಹೊಳಿ, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಮಂಜುಳಾ ಗೌಂಡಿ, ಉಪಾಧ್ಯಕ್ಷ ಸ್ಥಾನಕ್ಕೆ ಸಲೀಂಪಾಷಾ ವಾಲೀಕಾರ ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ಇಲ್ಲದ್ದರಿಂದ ಅವರು ಸಭೆಯಿಂದ ದೂರ ಉಳಿದದ್ದು ಕಂಡು ಬಂದಿತು. ಒಟ್ಟು 16 ಸದಸ್ಯರಲ್ಲಿ 8 ಸದಸ್ಯರು ಹಾಜರಿದ್ದ ಕಾರಣ ಕೋರ್‌ಂ ಭರ್ತಿ ಆಗಿದೆ ಎಂದು ಪರಿಗಣಿಸಿ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಆರ್.ಎಂ. ಹುಂಡೇಕಾರ ನಡೆಸಿದರು. ಅಧ್ಯಕ್ಷರಾಗಿ ಶಂಕ್ರವ್ವ ಮಾದರ, ಉಪಾಧ್ಯಕ್ಷರಾಗಿ ಸಂಗಪ್ಪ ಹೊಳಿ ಆಯ್ಕೆಯಾಗಿದ್ದಾರೆ ಎಂದು ಫಲಿತಾಂಶ ಪ್ರಕಟಿಸಿದರು. ಬಳಿಕ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಬ್ಬರು ಬಿಜೆಪಿ ಶಾಲು ಧರಿಸಿ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಮುಖಂಡ ಮಲಕೇಂದ್ರಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಶಿವಾನಂದ ಮಂಕಣಿ, ರಾಜು ಹೊಳಿ ಮೊದಲಾದವರು ಇದ್ದರು.
ಫಲಿತಾಂಶ ಪ್ರಕಟವಾಗುತ್ತಲೇ ಬಿಜೆಪಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಮುಖಂಡರು ಚುನಾವಣಾಧಿಕಾರಿಯಿದ್ದ ಕೊಠಡಿಗೆ ತೆರಳಿ ಅವರನ್ನು ತರಾಟೆ ತೆಗೆದುಕೊಂಡರು. ತಾಪಂ ಮಾಜಿ ಸದಸ್ಯ ಶ್ರೀಶೈಲ ಮರೋಳ, ಮುಖಂಡ ಬಸವರಾಜ ಇಸ್ಲಾಂಪುರ, ರಾಜುಗೌಡ ಕೊಂಗಿ, ಅಶೋಕ ತಂಗಡಗಿ, ಸಂಗಣ್ಣ ದೇವರಮನಿ, ಮಹಾಂತೇಶ ಹೊಳಿ, ಸಂಗಣ್ಣ ಕವಡಿಮಟ್ಟಿ, ಮಲೀಕಸಾಬ ನದಾಫ, ರಾಮಣ್ಣ ಕುಂಟೋಜಿ, ಬಸವರಾಜ ತಾಳಿಕೋಟಿ, ಯಲ್ಲಾಲಿಂಗ ಚಲವಾದಿ ಮತ್ತಿತರರು ಕೋರ್‌ಂ ಭರ್ತಿ ಇರದಿದ್ದರೆ ಚುನಾವಣೆ ಪ್ರಕ್ರಿಯೆ ನಡೆಸುವುದಿಲ್ಲ ಎಂದವರು ಬಳಿಕ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಸಭೆಗೆ ಬಿಡದೇ ಕಾನೂನು ಉಲ್ಲಂಘನೆ ಮಾಡಿ, ಬಿಜೆಪಿ ಏಜೆಂಟ್‌ರಂತೆ ವರ್ತಿಸಿದ್ದೀರಿ ಎಂದು ದೂರಿದರು. ಒಂದು ಹಂತದಲ್ಲಿ ಚುನಾವಣಾಧಿಕಾರಿ ಸುತ್ತುವರೆದ ಮುಖಂಡರು ಫಲಿತಾಂಶ ಪ್ರಕಟಿಸಿದ್ದಕ್ಕೆ ಹರಿಹಾಯ್ದರು. ಪಿಎಸ್‌ಐ ಆರೀಫ್ ಮುಶಾಪುರಿ ಹಾಗೂ ಪೊಲೀಸರು ಎಲ್ಲರನ್ನು ಹೊರಗಡೆ ಕಳಿಸಿದರು. ಗ್ರಾಪಂನ ಸಭೆಗಾಗಿ ಕೋರಂ ಸದಸ್ಯರ ಒಟ್ಟು ಸಂಖ್ಯೆಯ ಅರ್ಧದಷ್ಟು ಆಗಿರತಕ್ಕದ್ದು ಎಂಬುದನ್ನೇ ಪರಿಗಣಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಸಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು. ಈ ಬಗ್ಗೆ ತಹಸೀಲ್ದಾರ್ ರೇಖಾ ಟಿ., ಅವರನ್ನು ಸಂಪರ್ಕಿಸಿದಾಗ, ನಾವು ಚುನಾವಣಾಧಿಕಾರಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡಿರುತ್ತೇವೆ. ಚುನಾವಣಾಧಿಕಾರಿ ತೀರ್ಮಾನವೇ ಅಂತಿಮ ಎಂದರು.