ಗ್ರಾಪಂ ಅಧ್ಯಕ್ಷರ ಮೇಲೆ ತಲವಾರು ದಾಳಿ

thalvar web
Published on

ಕಡಬ: ಎರಡು ಗುಂಪುಗಳ ಮಧ್ಯೆ ನಡೆಯುತ್ತಿದ್ದ ಗಲಾಟೆ ಬಿಡಿಸಲು ಹೋದ ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನದಾಸ್ ರೈ(47) ಹಾಗೂ ಇತರ ಇಬ್ಬರ ಮೇಲೆ ಶುಕ್ರವಾರ ತಡರಾತ್ರಿ ಮುಸ್ಲಿಂ ಯುವಕರ ತಂಡ ತಲವಾರಿನಿಂದ ದಾಳಿ ನಡೆಸಿ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದೆ.
ಮೋಹನ್‌ದಾಸ್ ರೈ ರಾತ್ರಿ ಕಾರಿನಲ್ಲಿ ಆಲಂಕಾರು ನಿವಾಸಿ ರಾಘವ ಹಾಗೂ ಶಿವರಾಮ ಎಂಬುವರ ಜತೆ ಮನೆಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ಪೆರಾಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಜನರ ಗುಂಪೊಂದು ಜಮಾಯಿಸಿ, ಯಾವುದೋ ವಿಚಾರಕ್ಕೆ ಗಲಾಟೆ ನಡೆಸುತ್ತಿತ್ತು.
ಕಾರು ನಿಲ್ಲಿಸಿದಾಗ ಗುಂಪಿನಲ್ಲಿ ಪರಿಚಯವಿದ್ದ ಇಬ್ರಾಹಿಂ ಎಂಬಾತ ಕಾರಿನ ಬಳಿ ಬಂದು ನನ್ನ ಅಳಿಯ ಯಾವುದೋ ವಾಟ್ಸಾೃಪ್ ವಿಚಾರವಾಗಿ ಸಮಸ್ಯೆ ಮಾಡಿಕೊಂಡಿದ್ದು, ಬಗೆಹರಿಸುವಂತೆ ಕೇಳಿಕೊಂಡರು. ಈ ವೇಳೆ ಗುಂಪಿನಲ್ಲಿದ್ದ ರಾಜೀಕ್, ಜುಬೈರ್, ಜುನೈದ್, ಮೊಯಿದುಕುಂಞಿ, ಸಂಶು ಅಮನ್, ಸಾಹುಲ್ ಹಮೀದ್ ಹಾಗೂ ಇತರರು ಕಾರಿನ ಹತ್ತಿರ ಬಂದು ಮೋಹನದಾಸ್ ರೈ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಕಾರಿನಿಂದ ಎಳೆದು ಹಲ್ಲೆ ನಡೆಸಿದ್ದಾರೆ. ಬಳಿಕ ರಾಜೀಕ್ ಎಂಬಾತ ತಲವಾರು ಬೀಸಿ ಅಧ್ಯಕ್ಷರ ಜತೆಗಿದ್ದ ಶಿವರಾಮ ಅವರ ಬೆನ್ನಿಗೆ ಗಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಹೊರಟಾಗ ಆರೋಪಿಗಳು ಕಾರನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net