ಮುನ್ನೆಚ್ಚರಿಗಳನ್ನು ತೆಗೆದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು - ಜುಬಿನ್ ಮೊಹಾಪಾತ್ರ

IMG-20240710-WA0020
Published on

ಪುತ್ತೂರು: ರೋಗಗಳ ನಿಯಂತ್ರಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಹೆಚ್ಚಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ ಎಲ್ಲವನ್ನು ಬೇಗ ನಿಯಂತ್ರಣ ಮಾಡಬಹುದು. ಮುನ್ನೆಚ್ಚರಿಗಳನ್ನು ತೆಗೆದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು. ವಿಪತ್ತು ನಿರ್ವಹಣೆಯ ವಿಚಾರದಲ್ಲಿ ಕೈಗೊಂಡ ರೀತಿಯಲ್ಲೇ ಅಧಿಕಾರಿಗಳು ಡೆಂಗೆ ನಿಯಂತ್ರಣದಲ್ಲೂ ಹೆಚ್ಚಿನ ಕೆಲಸ ನಿರ್ವಹಿಸಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.

ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ, ನಗರ ಸಭೆ, ಆರೋಗ್ಯ ಇಲಾಖೆ ವತಿಯಿಂದ ಪುತ್ತೂರು ತಾಲೂಕಿನಲ್ಲಿ ಡೆಂಗೆ ಮತ್ತು ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾತನಾಡಿ ಡೆಂಗೆ ಶಂಕಿತ ಹಾಗೂ ದೃಢೀಕೃತ ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಜ್ವರ ಬಿಟ್ಟು ಬಿಟ್ಟು ಬರುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ಸಲ ಡೆಂಗೆ ಬಂದವರಿಗೆ ಮತ್ತೆ ಆರೋಗ್ಯ ಸಮಸ್ಯೆ ಬಂದರೆ ಅಪಾಯ ಜಾಸ್ತಿಯಿರುತ್ತದೆ. ಡಂಗೆ ಗೆ ನಿರ್ದಿಷ್ಟ ಚಿಕಿತ್ಸೆ, ವ್ಯಾಕ್ಸಿನ್ ಬಂದಿಲ್ಲ. ಆಯಾ ರೋಗದ ಗುಣಲಕ್ಷಣ ನೋಡಿ ಔಷಧೋಪಚಾರ ಮಾಡಬೇಕಾಗಿದ್ದು, ಮುಖ್ಯವಾಗಿ ವಿಶ್ರಾಂತಿ ಅಗತ್ಯವಾಗಿದೆ. ಕಿವಿ ಹಣ್ಣಿಗೂ ಡೆಂಗೆಗೂ ಯಾವುದೇ ಸಂಬಂಧವಿಲ್ಲ. ಪಪ್ಪಾಯಿ ಎಲೆಯನ್ನೂ ಬಳಸುವುದರಿಂದ ಅಪಾಯಕ್ಕೊಳಗಾಗಬಹುದು. ಸೊಳ್ಳೆಯನ್ನು ನಿಯಂತ್ರಣ ಮಾಡುವ ಮೂಲಕ ಡಂಗೆ ನಿಯಂತ್ರಣ ಮಾಡಬಹುದು ಎಂದರು.

ತಾಲೂಕಿನ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅನುಮಾನಗಳನ್ನು ಬಗೆಹರಿಸಿಕೊಂಡರು.

ತಹಸೀಲ್ದಾರ ಪುರಂದರ ಹೆಗ್ಡೆ, ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ, ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಆರ್. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net