ಗುಡಿಸಲು ವಾಸಿ ವಲಸೆ ಕುಟುಂಬ ಸಮಸ್ಯೆಗೆ ಕಿವಿಯಾದ ತಹಸೀಲ್ದಾರ್

thahasildhar new
Published on

ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಳಾ ಸಮೀಪದ ಮಂಗನಜಡ್ಡು ಎಂಬಲ್ಲಿ ಹೀನಾಯ ಸ್ಥಿತಿಯಲ್ಲಿ ಗುಡಿಸಲಿನಲ್ಲಿ ವಾಸಿಸುವ ವಲಸೆ ಕುಟುಂಬದ ಸಮಸ್ಯೆಗೆ ತಹಸೀಲ್ದಾರ್ ಪುರಂದರ್ ಸ್ಪಂದಿಸಿದ್ದಾರೆ. ಕುಟುಂಬ ಗುಡಿಸಲಿನಲ್ಲಿ ಸಂಕಷ್ಟದ ಜೀವನ ನಡೆಸುತ್ತಿರುವ ಬಗ್ಗೆ ಮಾ.27ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ತಹಸೀಲ್ದಾರ್, ಗುರುವಾರ ಪತ್ರಕರ್ತರೊಂದಿಗೆ ಸ್ಥಳಕ್ಕೆ ತೆರಳಿ ಕುಟುಂಬದ ಸಮಸ್ಯೆ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಾರೆ.

ಸರ್ಕಾರದ ಕಾನೂನಿನ ಚೌಕಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಂಡು ಗ್ರಾಮ ಪಂಚಾಯಿತಿ ಹೊಂದಾಣಿಕೆಯೊಂದಿಗೆ ನಿವೇಶನ ಮತ್ತು ಆಶ್ರಯ ಮನೆ ಮಂಜೂರಾತಿಯ ಭರವಸೆ ನೀಡಿದರು. ಈ ವಲಸೆ ಕುಟುಂಬ ಯಾವುದೇ ದಾಖಲೆಗಳನ್ನು ಹೊಂದಿರದ ಕಾರಣ ಆಧಾರ್ ಕಾರ್ಡ್, ವೋಟರ್ ಐಡಿ, ಜಾತಿ ಪ್ರಮಾಣ ಪತ್ರವನ್ನು ಎರಡು ದಿನದೊಳಗಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಮನೆಯ ಹಿರಿಯ ಮಹಿಳೆ ಗೌರಮ್ಮ ಅವರಿಗೆ ಪಿಂಚಣಿ ಅತೀ ಶೀಘ್ರದಲ್ಲಿ ಮಂಜೂರು ಮಾಡುವುದರೊಂದಿಗೆ, ಮಗ ವಿಶ್ವನಾಥ್‌ಗೆ ಅಂಗವಿಕಲ ವೇತನವನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು.

ಆರೋಗ್ಯ ತಪಾಸಣೆಗೆ ಸೂಚನೆ

ನಿಂತ ನೀರಿನಲ್ಲಿ ಸ್ನಾನ ಮಾಡುವುದರಿಂದ ಹುಳಕಜ್ಜಿ ಆಗಿರುವುದನ್ನು ಗಮನಿಸಿ ಕುಟುಂಬದವರ ಆರೋಗ್ಯ ತಪಾಸಣೆ ನಡೆಸುವಂತೆ ಹೆಬ್ರಿ ಆರೋಗ್ಯ ಸಮುದಾಯದ ಭವನ ಸಿಬ್ಬಂದಿಗೆ ಸೂಚಿಸಿದರು. ಈಗಾಗಲೇ ಎರಡು ಮಕ್ಕಳು ತಾಯಿಯ ಸಂಪರ್ಕದಿಂದ ದೂರ ಇರುವ ಬಗ್ಗೆ ಮಾಹಿತಿ ಪಡೆದರು. ಮನೆಗೆ ಬೇಕಾದ ಅಕ್ಕಿ ಸಹಿತ ದಿನಬಳಕೆಯ ದಿನಸಿ ವಸ್ತು ಮತ್ತು ಧನಸಹಾಯವನ್ನೂ ಮಾಡಿದರು.

ನೆರವು ನೀಡಲು ತಹಸೀಲ್ದಾರ್ ಮನವಿ

ತಾತ್ಕಾಲಿಕ ಜೀವನಕ್ಕೆ ಹೆಬ್ರಿಯ ಸುತ್ತಮುತ್ತಲಿನಲ್ಲಿರುವ ದಾನಿಗಳು ಈ ಕುಟುಂಬದ ಸಹಾಯಕ್ಕೆ ಬರುವಂತೆ ತಹಸೀಲ್ದಾರ್ ವಿಜ್ಞಾಪಿಸಿದರು. ಮಳೆಗಾಲದ ಸಂದರ್ಭದಲ್ಲಿ ಗುಡಿಸಲಿನ ಒಳಗೆ ನೀರು ಬರುವುದರಿಂದ ತಾತ್ಕಾಲಿಕವಾಗಿ ಸಿಮೆಂಟ್, ತಗಡು ಶೀಟುಗಳನ್ನು ದಾನಿಗಳು ನೀಡಿ ಸಹಕರಿಸಿ ಎಂದು ಕೇಳಿಕೊಂಡರು. ವಿಜಯವಾಣಿ ಮಾನವೀಯ ವರದಿಯನ್ನು ಉಲ್ಲೇಖಿಸಿ, ಅಭಿನಂದಿಸಿದರು.

ಬಹಳ ಕಷ್ಟಕರ ಜೀವನವನ್ನು ಈ ಕುಟುಂಬ ನಡೆಸುತ್ತಿರುವುದು ತಿಳಿಯಿತು. ಕುಟುಂಬಕ್ಕೆ ನಿವೇಶನವನ್ನು ನೀಡುವ ಕುರಿತು ಎಲ್ಲರೊಂದಿಗೆ ಚರ್ಚಿಸಿ ಸಮರ್ಪಕ ಕ್ರಮ ಕೈಗೊಳ್ಳುವುದರ ಮೂಲಕ ಗುಡಿಸಲಿನ ಜೀವನಕ್ಕೆ ವಿದಾಯ ಹೇಳಲಿದ್ದೇವೆ.

ಕೆ.ಪುರಂದರ, ತಹಸೀಲ್ದಾರ್ ಹೆಬ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net