

ಹಾಸನ: ತೆಂಗು ಬೆಳೆಗೆ ಬಾಧಿಸುವ ರೋಗವನ್ನು ತಡೆಯಲು ಪ್ರಾಥಮಿಕ ಹಂತದಲ್ಲಿಯೇ ಕ್ರಮ ತೆಗೆದುಕೊಂಡರೆ ರೋಗವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ನೀಡಲಾಗುವ ಔಷಧಗಳನ್ನು ಪಡೆದು ರೋಗವನ್ನು ನಿಯಂತ್ರಿಸಬಹುದು ಎಂದು ಸಂಸದ ಶ್ರೇಯಸ್ ಎಂ ಪಟೇಲ್ ಹೇಳಿದರು.
ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ತೆಂಗು ಬೆಳೆಗೆ ಕಂಡುಬಂದಿರುವ ರೋಗ, ಕೀಟಗಳು ಹಾಗೂ ಉತ್ತಮ ಬೇಸಾಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಎಲ್ಲ ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲಾ ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ತೆಂಗು ಕಾಯಕಲ್ಪ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ತೆಂಗು ಬೆಳೆಗೆ ಬರುತ್ತಿರುವಂತ ರೋಗದ ಕುರಿತಾಗಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ರಥಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ಸೂಕ್ಷ್ಮವಾಗಿ ಮತ್ತು ಅತಿ ಜರೂರಾಗಿ ತೆಂಗಿನ ಗಿಡಕ್ಕೆ ಬರುತ್ತಿರುವ ರೋಗದ ಕುರಿತಾಗಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಸದನದಲ್ಲಿ ಈ ಸಮಸ್ಯೆ ಕುರಿತಾಗಿ ಗಮನ ಸೆಳೆಯುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ರೋಗವನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳುತ್ತೇವೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರಲ್ಲದೆ ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿ ಭೇಟಿ ಮಾಡಲು ತಿಳಿಸಿದರು.
ರಾಜ್ಯದಲ್ಲೇ ಹಾಸನಕ್ಕೆ 2ನೇ ಸ್ಥಾನ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ತೆಂಗು ಬೆಳೆ ಉತ್ಪಾದನೆಯಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. 1 ಲಕ್ಷದ 18 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ ಎಂದರು.
ಪ್ರಸ್ತುತ ಹಲವಾರು ರೋಗಗಳು ತೆಂಗು ಬೆಳೆಯನ್ನು ಕಾಡುತ್ತಿವೆ ಮತ್ತು ಇಳುವರಿ ಕಡಿಮೆಯಾಗುತ್ತಿದೆ. ಹಾಗಾಗಿ ಇದನ್ನು ಯಾವ ರೀತಿ ತಡೆಗಟ್ಟಬೇಕು, ನಿಯಂತ್ರಿಸಬೇಕು ಎಂಬುದರ ಕುರಿತಾಗಿ ಈ ರಥದ ಮೂಲಕ ಸಾಕಷ್ಟು ಎಚ್ಚರಿಕೆಗಳನ್ನು ಮತ್ತು ಆ ರೋಗವನ್ನು ತಡೆಗಟ್ಟಲು ಔಷಧಗಳು ಎಲ್ಲಿ ಸಿಗುತ್ತವೆ ಎಂಬ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.
ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ತೆಂಗು ಕಾಯಕಲ್ಪ ರಥ ಪ್ರಚಾರ ಮಾಡಲಿದೆ. ಜಿಲ್ಲೆಯ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಂಡು ಔಷಧ ಮಾಹಿತಿ ಮತ್ತು ಯಾವ ರೀತಿ ಅದನ್ನು ಬಳಕೆ ಮಾಡಬೇಕು ಎಂಬುದರ ಕುರಿತಾಗಿ ತಿಳಿದುಕೊಂಡು ಈ ರೋಗಗಳನ್ನು ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ತೆಂಗಿನ ಬೆಳೆಯಲ್ಲಿ ಬೇರೆ-ಬೇರೆ ಕಾರಣದಿಂದ ರೋಗ ಮತ್ತು ಕೀಟಗಳ ಬಾಧೆ ಹೆಚ್ಚಾಗಿದ್ದು, ತೆಂಗಿನ ಇಳುವರಿ ಕುಂಠಿತವಾಗಿದೆ ಎಂದರು.
ಜಿಲ್ಲೆಯಲ್ಲಿ ಕಾಂಡ ಸೋರುವ ರೋಗ ಮತ್ತು ಅಣಬೆ ರೋಗ ಹಾಗೂ ಕಪ್ಪು ತಲೆ ಹುಳು, ರುಗೋಸ್ ಬಿಳಿನೋಣ ಕೀಟಗಳು ಹೆಚ್ಚಾಗಿ ಕಂಡು ಬಂದಿದೆ ಇದಕ್ಕೆ ಔಷಧಗಳನ್ನು ಇಲಾಖೆಯಿಂದ ವಿತರಿಸಲಾಗುತ್ತಿದೆ. ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದರು.
ತೆಂಗು ಬೆಳೆಯನ್ನು ಹೆಚ್ಚಾಗಿ ಬಾಧಿಸುವ ಕಪ್ಪು ತಲೆ ಹುಳು ಹಾಗೂ ರೋಗಗಳು ನಿಯಂತ್ರಣಕ್ಕೆ ಪರೋಪ ಜೀವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ಜಿಲ್ಲೆಯ ರೈತರಿಗೆ ಉಚಿತವಾಗಿ ವಿತರಿಸುವ ಉದ್ದೇಶದಿಂದ ಅರಸೀಕೆರೆ ಮತ್ತು ಹೊಳೆನರಸೀಪುರ ಪ್ರಯೋಗಾಲಯಗಳನ್ನು ಉನ್ನತೀಕರಣಕ್ಕೆ 3 ಕೋಟಿ ರೂ. ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
ತೆಂಗಿನ ಬೆಳೆಯಲ್ಲಿ ಸಮಗ್ರ ರೋಗ ಕೀಟ ನಿಯಂತ್ರಣ ಹಾಗೂ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವಶ್ಯಕವಿರುವ ಪರಿಕರಗಳನ್ನು ರೈತರಿಗೆ ಒದಗಿಸಲು 197 ಕೋಟಿ ರೂ. ಪ್ರಸ್ತಾವನೆಯನ್ನು ಹಾಗೂ ತೆಂಗು ಬೆಳೆಗೆ ಸಮರ್ಪಕವಾಗಿ ನೀರನ್ನು ಪೂರೈಸಲು ಅನುಗುಣವಾಗುವಂತೆ ಭೂ ಮೇಲ್ಮೈ ನೀರಾವರಿ ವ್ಯವಸ್ಥೆ (ಠ್ಠಚಿ ಠ್ಠ್ಟ್ಛಚ್ಚಛಿ ಜ್ಟ್ಟಿಜಿಜಠಿಜಿಟ್ಞ ಠಿಛಿಞ) ಅಳವಡಿಸಲು ಸಹಾಯಧನ ವಿತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆಯಲ್ಲಿ ರೈತರಿಗೆ ಮಾಹಿತಿ ನೀಡುವ ಕರಪತ್ರ ಹಾಗೂ ಪೋಸ್ಟರ್‌ಗಳನ್ನೂ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಮಂಜುನಾಥ್, ಸಹಾಯಕ ತೋಟಗಾರಿಕಾ ನಿರ್ದೇಶಕ ತೇಜ್ ಕುಮಾರ್ ಇತರರು ಇದ್ದರು.