

ಅಥಣಿ: ಅಥಣಿ ಹಾಗೂ ಕಾಗವಾಡ ತಾಲೂಕಿನ ಮಧ್ಯೆ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸುವ ಯೋಜನೆ ಇದೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
ಅಥಣಿ ಪಟ್ಟಣದ ಹೊಳಿಕಟ್ಟಿ ಗಲ್ಲಿಯ ಆವರಣದಲ್ಲಿ ಇತ್ತೀಚೆಗೆ ಮುಲ್ಲಾ ಪರಿವಾರದಿಂದ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಅಥಣಿ ತಾಲೂಕಿನಲ್ಲಿರುವ ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿ ಆರ್ಥಿಕವಾಗಿ ಸದೃಢವಾಗುವಂತೆ ಮಾಡುವುದೇ ನನ್ನ ಗುರಿ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡೂ ಮತಕ್ಷೇತ್ರಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲಾಗುವುದು ಎಂದರು.
ಯುವ ಉದ್ಯಮಿ ಅಬ್ದುಲ್‌ಬಾರಿ ಮುಲ್ಲಾ ಮಾತನಾಡಿ, ಶ್ರೀಮಂತ ಪಾಟೀಲರು ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ತಾಲೂಕಿನಲ್ಲಿ ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ನಿವಾರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು. ಸಚಿವರಾದ ಮೇಲೆ ಪ್ರಥಮ ಬಾರಿಗೆ ಅಥಣಿಗೆ ಆಗಮಿಸಿದ ಶ್ರೀಮಂತ ಪಾಟೀಲರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಪ್ರಕಾಶ ಮಹಾಜನ್. ಎಚ್.ಆರ್.ಚಮಕೇರಿ, ಶ್ರೀನಿವಾಸ ಪಾಟೀಲ, ಸೋಮನಿಂಗಗೌಡ ಪಾಟೀಲ, ರಾಜಕುಮಾರ ಟಾಕಳಿ, ಎಚ್.ಡಿ.ಮುಲ್ಲಾ, ನಾಯಕವಾಡಿ, ರಾಜಾಸಲೀಂ ಕಾಶಿನಂವರ, ಜಬಿಯುಲ್ಲಾ ಖಾಜಿ, ಜಿಸಾನ ಅಮ್ಮದಖಾನ್, ಅಶೋಕ ಪವಾರ, ಯೋಗೀಶ ಪಾಟೀಲ, ದಾದಾಪೀರ ಜಮಾದಾರ ಇತರರು ಇದ್ದರು.