

ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳು ಸಿದ್ಧವಿದೆ. ಎಲ್ಲ ಶಾಲಾ-ಕಾಲೇಜುಗಳಿಗೆ ವಿತರಣೆಗೂ ಎಲ್ಲ ತಯಾರಿಯನ್ನು ಇಲಾಖೆ ಮಾಡಿಕೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಜಾರಿಗೊಳಿಸಿದ ಪರಿಣಾಮ ನಿರೀಕ್ಷೆಯಂತೆಯೇ ಫಲಿತಾಂಶ ಕೊಂಚ ಕಡಿಮೆಯಾಗಿದೆ. ಆದರೆ ದ್ವಿತೀಯ ಪಿಯುವಿನ 2 ಮತ್ತು 3ನೇ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಶುಲ್ಕ ತೆಗೆದುಕೊಳ್ಳುವುದು ಬೇಡವೆಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಒಂದೊಂದು ವಿಷಯಕ್ಕೂ 400 ರೂ. ಕಟ್ಟಬೇಕಿದೆ. ಬಡತನ ಮತ್ತಿತರ ಕಾರಣಗಳಿಂದ ಕಡಿಮೆ ಅಂಕ ಪಡೆದವರು ಮತ್ತು ಅನುತ್ತೀರ್ಣರಾದರಿಗೆ ಶುಲ್ಕ ಪಾವತಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಮಾತ್ರ ಶುಲ್ಕ ತೆಗೆದುಕೊಳ್ಳದೇ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು. ಸರ್ಕಾರವೇ ಪರೀಕ್ಷಾ ಶುಲ್ಕ ಭರಿಸಲಿದ್ದು 2 ಮತ್ತು 3ನೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳನ್ನೂ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ಜಾಸ್ತಿ ಇರುವ ಕಾರಣ ಬೆಳಗ್ಗೆ ಮತ್ತು ಸಂಜೆ ತರಬೇತಿ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ವಿಭಿನ್ನ ಭಾಷೆ, ಜಾತಿ, ಧರ್ಮವಿದ್ದರೂ ಎಲ್ಲರೂ ಒಟ್ಟಾಗಿ ಮುನ್ನೆಡೆಯಬೇಕು ಎಂಬುದನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ತಿಳಿಸಿದ್ದಾರೆ. ಹಾಗಾಗಿ ನಾನು ಶಿಕ್ಷಣ ಸಚಿವನಾದ ಮೇಲೆ ಎಲ್ಲ ಶಾಲೆಗಳಲ್ಲೂ ಸಂವಿಧಾನದ ಪೀಠಿಕೆ ಬೋಧನಾ ವುವಸ್ಥೆ ಜಾರಿ ತರಲಾಗಿದೆ. ಸಂವಿಧಾನದ ಪೀಠಿಕೆಯನ್ನು ಮಕ್ಕಳ ಬಾಯಲ್ಲಿ ಹೇಳಿಸಲಾಗುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳನ್ನು ಸರಿದಾರಿಗೆ ಕೊಂಡೊಯ್ಯಲು ಅದು ನೆರವಾಗಲಿದೆ ಎಂದು ಹೇಳಿದರು.