

ಚಿಕ್ಕಪಡಸಲಗಿ: ಬುದ್ಧಿ ಮತ್ತೆ ಬೆಳವಣಿಗೆಗೆ ಪಠ್ಯಪುಸ್ತಕಗಳು ಸಹಕಾರಿಯಾಗಿವೆ. ಕಾರಣ ಪುಸ್ತಕಗಳ ನಂಟು ಶಾಲಾ ಮಕ್ಕಳು ಸರಿಯಾಗಿ ಇರಿಸಿಕೊಂಡರೆ ಶೈಕ್ಷಣಿಕ ಗಂಟು ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂದು ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಭಿಪ್ರಾಯಿಸಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಕೊಡಮಾಡಿದ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು ಪಠ್ಯ ಪುಸ್ತಕದ ಪುಟಗಳನ್ನು ಧ್ಯಾನಿಸುತ್ತಾ ಒಂದೊಂದಾಗಿ ತೆರೆದು ಪಾಠ ಪ್ರವಚನದೊಂದಿಗೆ ಸರಿಯಾಗಿ ಅರ್ಥೈಸಿಕೊಂಡರೆ ಶೈಕ್ಷಣಿಕ ಪಯಣ ಸುಲಲಿತವಾಗಿ ಸಾಗುತ್ತದೆ. ಆ ನಿಟ್ಟಿನಲ್ಲಿ ಓದು,ಬರಹದ ಅಭ್ಯಾಸಕ್ಕೆ ಮಹತ್ವ ನೀಡಬೇಕು.ಹುಮ್ಮಸ್ಸಿನಿಂದ ಅಧ್ಯಯನ ಪ್ರವತ್ತಿ ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
ಪುಸ್ತಕ ಪ್ರಭಾವ ಹೊಂದಿದರೆ ಶೈಕ್ಷಣಿಕ ಜೀವನ ಸುಗಮವಾಗುತ್ತದೆ.ಮಸ್ತಕಕ್ಕೆ ಪುಸ್ತಕ ಚರಣ ತಾಗಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ. ಪುಸ್ತಕಗಳ ಜೊತೆ ಅಪ್ತ ಸಂಬಂಧ, ಏಕಾಗ್ರತೆ ಇಟ್ಟುಕೊಂಡು ಮೇರು ವ್ಯಕ್ತಿತ್ವದ ಚಹರೆ ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ನಿಮ್ಮ ಶೈಕ್ಷಣಿಕ ಜೀವನ ಮಟ್ಟವನ್ನು ಸುಧಾರಿಸಿ ಬದುಕಿನ ಆಶೋತ್ತರಗಳನ್ನು ಈಡೇರಿಸುವ ಶಕ್ತಿ ಪಠ್ಯ ಪುಸ್ತಕಗಳಲ್ಲಿದೆ. ಪುಸ್ತಕ ಸಾಧನಗಳು ಇಡೀ ಜೀವನ ಚೈತ್ರದ ಸ್ವಾಸ್ಥ್ಯ ಕಾಪಾಡುತ್ತದೆ. ಶಾಲಾ ಮಕ್ಕಳು ಪುಸ್ತಕ ಸ್ನೇಹಿಗಳಾಗಿ ಶಿಕ್ಷಣ ಪ್ರಜ್ಞೆ ತಾಳಬೇಕು. ಮನುಕುಲಕ್ಕೆ ಇಂದು ಶಿಕ್ಷಣ ಅತ್ಯಗತ್ಯ. ಸ್ವಾಭಿಮಾನದ ನಡೆಗೆ ಪುಸ್ತಕಗಳ ಜ್ಞಾನ ರಸದ ಬಿಂಬಗಳು ನೆಮ್ಮದಿ ನೀಡುತ್ತವೆ ಎಂದರು.
ಮಕ್ಕಳು ದೈನಂದಿನ ಜೀವನದಲ್ಲಿ ವ್ಯಾಪಕ ಪುಸ್ತಕ ಪ್ರೀತಿಯುಳ್ಳ ಒಡನಾಟ ಬೆಳೆಸಿಕೊಳ್ಳಲು ಮನಸ್ಸು ತೋರಬೇಕು. ಪಠ್ಯ ಪುಸ್ತಕಗಳೇ ಜೀವನ ರೂಪಧಾರಣೆಯ ಆವಿಷ್ಕಾರವಾಗಿದ್ದು, ನವೀನ ಮಾದರಿಯ ಜ್ಞಾನ ಸಂಪಾದನೆಗೆ ಸದಾ ಹಾತೊರೆಯುತ್ತಿರಬೇಕು. ಕಲಿಕೆಯಲ್ಲಿ ಕ್ರಿಯಾಶೀಲ, ಸೃಜನಶೀಲ ಗುಣಸ್ವಭಾವ ಜೊತೆಗೆ ಪ್ರಬುದ್ಧ ಮನೋಭಾವ ಹೊಂದಬೇಕು.ಉತ್ತಮ ವ್ಯಾಸಂಗದೊಂದಿಗೆ ವಿದ್ಯಾವಂತ ಮಕ್ಕಳಾಗಿ ಸಮಾಜದಲ್ಲಿ ಮಿನುಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಿಆರ್‌ಪಿ ಆರ್.ಎಚ್.ಮುದ್ನೂರ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಗೌರವ ಶಿಕ್ಷಕ ಲೋಹಿತ ಮಿರ್ಜಿ, ಈರಪ್ಪ ದೇಸಾಯಿ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿ ಸಹನಾ ಹತ್ತಳ್ಳಿ (ಕಲ್ಯಾಣಿ), ಶ್ರುತಿ ಲಿಗಾಡೆ ಇತರರಿದ್ದರು.
ಗದುಗಿನ ತೋಂಟದ ಲಿಂ. ಡಾ. ಸಿದ್ದಲಿಂಗ ಮಹಾಸ್ವಾಮಿಗಳು, ಡಾ. ಸಿದ್ದರಾಮ ಪೂಜ್ಯರು, ಪ್ರೊ. ಶಿವಾನಂದ ಪಟ್ಟಣಶೆಟ್ಟರ ಅವರ ಕಳಕಳಿಯಿಂದ ಗ್ರಾಮದಲ್ಲಿ ಶೈಕ್ಷಣಿಕ ವಾತಾವರಣ ಸಷ್ಟಿಯಾಗಿದೆ. ಮಹನೀಯರು ಕಂಡ ದೂರದಷ್ಟಿ ಫಲವಾಗಿ ಇಲ್ಲಿನ ಮಕ್ಕಳು ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಅವರ ಆಶಯ ಸಾಕಾರಗೊಳಿಸುತ್ತಿರುವುದು ಸಂತಸ ತಂದಿದೆ. -ಬಸವರಾಜ ಜಾಲೋಜಿ, ಪ್ರಭಾರ ಮುಖ್ಯ ಶಿಕ್ಷಕ, ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ, ಚಿಕ್ಕಪಡಸಲಗಿ