ಸುಗಮ ಸಂಗೀತ ಕಲಿಸಲು ಪಠ್ಯ ಅವಶ್ಯಕ; ಆನಂದ ಮಾದಲಗೆರೆ ಅಭಿಮತ

inchara
Published on

ಬೆಂಗಳೂರು: ಸುಗಮ ಸಂಗೀತ ಕ್ಷೇತ್ರ ಬದಲಾದ ಕಾಲಘಟ್ಟಕ್ಕನುಗಣವಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಬಲಿಷ್ಠ ಮಾದ್ಯಮವಾಗಿ ಪರಿಣಮಿಸಿದ್ದು, ಇಂತಹ ಕಾಲದಲ್ಲಿ ಸುಗಮ ಸಂಗೀತವನ್ನು ಹೊಸ ಪೀಳಿಗೆಗೆ ಕಲಿಸಲು ಒಂದು ಪಠ್ಯ ಇಲ್ಲದಿರುವುದು ನೋವಿನ ಸಂಗತಿ. ಇದನ್ನು ಮನಗಂಡು ಹೊಸ ಪಠ್ಯವನ್ನು ಸಿದ್ಧಪಡಿಸಲಾಗಿದೆ ಎಂದು ಸಂಗೀತ ಸಂಯೋಜನ ಆನಂದ ಮಾದಲಗೆರೆ ಹೇಳಿದ್ದಾರೆ.

ಇಂಚರ ಸುಗಮ ಸಂಗೀತ ಸಂಸ್ಥೆ ವತಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಬಂದ ಸಂದರ್ಭದಲ್ಲಿ ಆಯೋಜಿಸದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷನಾಗಿದ್ದ ಕಳೆದ 10 ವರ್ಷಗಳಲ್ಲಿ ಹಲವಾರು ವಿಚಾರ ಸಂಕಿರಣಗಳನ್ನು ಆಯೋಜಿಸುವುದರ ಮೂಲಕ ಇಂದಿನ ಅಧ್ಯಕ್ಷರಾದ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರ ಸಾರಥ್ಯದಲ್ಲಿ ಒಂದು ಪಠ್ಯವನ್ನು ಸಿದ್ದಪಡಿಸಿ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಅರ್ಹತಾ ಪತ್ರದೊಂದಿಗೆ ಪದವಿಕೂಡ ಪಡೆಯಬಹುದಾಗಿದೆ, ಹಾಗೆ ಉದ್ಯೋಗವನ್ನೂ ಸಹ ಪಡೆಯಬಹುದಾಗಿದೆ.

ಕಾಲ ಬದಲಾದಂತೆ ಸುಗಮ ಸಂಗೀತವನ್ನು ಕವಿರಚಿತ ಗೀತೆಗಳಿಗೆ ಸೀಮಿಗೊಳಿಸುವುದು ಸೂಕ್ತ. ಅನೇಕ ಸರ್ಕಾರಿ ವೇದಿಕೆಗಳಲ್ಲಿ ಸುಗಮಸಂಗೀತ ಆಯೋಜಿಸಲಾಗುತ್ತದೆ, ಆದರೆ ರಾಜ್ಯೋತ್ಸವ ಪ್ರಶಸ್ತಿ ವಿಚಾರ ಬಂದಾಗ ಈ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ ಎಂದು ಆನಂದ ಮಾದಲಗೆರೆ ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ, ಸಂಯೋಜಕ ಮೃತ್ಯುಂಜಯ ದೊಡ್ಡವಾಡ, ಕಲಾದೇಗುಲ ಶ್ರೀನಿವಾಸ್ ಮತ್ತು ಇಂಚರ ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net