

ಮಂಡ್ಯ: ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಸಮಯದಲ್ಲೇ ಕಾವ್ಯ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ ಸರ್ವತೋಮುಖವಾದ ಅಭಿವೃದ್ದಿಯತ್ತ ಸಾಗಬೇಕು. ಈ ಮೂಲಕ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಕರೆ ನೀಡಿದರು..
ನಗರದ ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಗಮಕ ಕಲಾ ಪರಿಷತ್, ರಾಜ್ಯ ಗಮಕ ಕಲಾ ಪರಿಷತ್, ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಮಹಾ ಕಾವ್ಯಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಏರ್ಪಡಿಸಿದ್ದ ಪಠ್ಯಾಧಾರಿತ ವಿಶೇಷ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಸ್ತು, ಸಮಯ ಪ್ರಜ್ಞೆ ಬಹಳ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ವ್ಯಾಸಂಗದ ಜತೆ ಕಾವ್ಯ ಪ್ರೀತಿಯನ್ನು ಉತ್ತಮ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮಹಾಕಾವ್ಯಗಳಲ್ಲಿನ ಆದರ್ಶ, ತ್ಯಾಗ, ಮನೋಭಾವ, ದೇಶಪ್ರೇಮ, ಭಾಷಾಭಿಮಾನ ಮಹತ್ವದ ಸಂಗತಿಗಳ ಪರಿಚಯವಾಗಿ ಮನುಷ್ಯನ ಬದುಕು ಸುಂದರವಾಗುತ್ತದೆ. ಸಮಾಜಕ್ಕೆ ಉತ್ತಮ ಕೊಡುಗೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ ಇಷ್ಟ ಪಟ್ಟು ವ್ಯಾಸಂಗ ಮಾಡಿದರೆ ಗುರಿ ಸಾಧಿಸಲು ಸಾಧ್ಯ. ಇವೆಲ್ಲಕ್ಕೂ ಲಲಿತ ಕಲೆಗಳಾದ ಗಮಕ ಸಂಗೀತ, ನೃತ್ಯ ದೈವೀಕ ಕಲೆಗಳ ಬಗೆಗಿನ ಪ್ರೀತಿ ಉತ್ತಮ ಅಡಿಪಾಯ ಹಾಕಿ ಕೊಡುತ್ತದೆ ಎಂದರು.
ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಗಮಕಿ ಕಲಾಶ್ರೀ ವಿದ್ಯಾಶಂಕರ್, ಮುಖ್ಯಶಿಕ್ಷಕಿ ನಯನಾ, ಶಿಕ್ಷಕಿ ಅಶ್ವಿನಿ ಇತರರಿದ್ದರು.