ಗ್ರಾಮಗಳಲ್ಲಿ ಟೆಸ್ಟಿಂಗ್ ಗುರಿ ತಲೆನೋವು

Covid
Published on

ಮಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೊನಾ ನಿಯಂತ್ರಣ ಕ್ರಮಗಳ ಮೇಲೆ ಹೆಚ್ಚಿನ ನಿಗಾ ಇಡಲು, ದಿನಕ್ಕೆ ಕೋವಿಡ್ ಪರೀಕ್ಷೆಯ ಗುರಿ ನಿಗದಿಪಡಿಸಿರುವುದು ಹೆಲ್ತ್ ವಾರಿಯರ್ಸ್‌ಗೆ ತಲೆನೋವಾಗಿದೆ.

ಪ್ರಸ್ತುತ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಕ್ಕೆ 75 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಕೋವಿಡ್ ಲ್ಯಾಬ್‌ಗೆ ಕಳುಹಿಸಬೇಕು ಎಂಬ ಸೂಚನೆ ಇದೆ. ಅದರಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ನರ್ಸ್‌ಗಳ ಮೂಲಕ ಟೆಸ್ಟ್ ಮಾಡಿಸುತ್ತಿದ್ದಾರೆ. ಇಲ್ಲಿಯವರೆಗೆ ಹೇಗೋ ಗುರಿ ತಲುಪಿದ್ದಾಗಿದೆ.

ಆದರೆ ಸದ್ಯ ಜನರಿಂದ ಪೂರಕ ಸ್ಪಂದನೆ ಸಿಗುತ್ತಿಲ್ಲ. ಕೆಲವರು ತಪಾಸಣೆಗೆ ಒಪ್ಪುತ್ತಿಲ್ಲ. ಪಾಸಿಟಿವ್ ಬಂದಲ್ಲಿ, ಅಂಥವರ ಸಂಪರ್ಕದಲ್ಲಿದ್ದವರನ್ನು ಟೆಸ್ಟ್ ಮಾಡುವುದು ಕಡ್ಡಾಯವಾದರೂ, ಕೈಗೆ ಸಿಗುತ್ತಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕೆಲವು ದಿನಗಳ ಮಟ್ಟಿಗೆ ಸಂಬಂಧಿಕರ ಮನೆಗೆ ತೆರಳುವವರೂ ಇದ್ದಾರೆ. ಇವೆಲ್ಲದರಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಗ್ರಾಮಮಟ್ಟದ ಅಧಿಕಾರಿಗಳ ಬೈಗುಳ ಕೇಳುವಂತಾಗಿದೆ. ಇನ್ನೊಂದೆಡೆ ಅಧಿಕಾರಿಗಳನ್ನು ಜಿಲ್ಲಾಮಟ್ಟದಲ್ಲಿ ಸಹಾಯಕ ಆಯುಕ್ತರು ಪ್ರಶ್ನಿಸುತ್ತಾರೆ. ಹೀಗಾಗಿ ಟಾರ್ಗೆಟ್ ತಲುಪಲು ಅಲೆದಾಟ ತಪ್ಪುತ್ತಿಲ್ಲ.

ಅಲೆದಾಡುವರಿಗೆ ಟೆಸ್ಟ್: ಲಾಕ್‌ಡೌನ್ ಇದ್ದರೂ, ಗ್ರಾಮಮಟ್ಟದಲ್ಲಿ ಅಲ್ಲಲ್ಲಿ ಅಲೆದಾಡುವವರು, ಬಸ್ ತಂಗುದಾಣ, ಕಟ್ಟೆಗಳಲ್ಲಿ ಸೇರಿ ಪಟ್ಟಾಂಗ ಹಾಕುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಪ್ರಸ್ತುತ ಅಂಥವರ ಕೋವಿಡ್ ತಪಾಸಣೆ ನಡೆಸಲಾಗಿದೆ. ಜತೆಗೆ ಕೆಲವೊಂದು ಏರಿಯಾಗಳಿಗೆ ತೆರಳಿ ತಪಾಸಣೆ, ವಸತಿ ಸಮುಚ್ಚಯಗಳಿದ್ದಲ್ಲಿ ಸಾಮೂಹಿಕ ತಪಾಸಣೆಗೆ ಒಳಪಡಿಸಲಾಗಿದೆ. ಮನೆಮನೆಗೆ ತೆರಳಿ ಟೆಸ್ಟ್ ಮಾಡುವ ಉದ್ದೇಶವನ್ನೂ ಗ್ರಾಮಮಟ್ಟದಲ್ಲಿ ಮಾಡಿದ್ದರಿಂದ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ದಿನದ ಟೆಸ್ಟಿಂಗ್ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಮ್ಮೆಯೂ ಕರೊನಾ ಟೆಸ್ಟ್ ಮಾಡಿಸಿಕೊಳ್ಳದವರ ಸಂಖ್ಯೆಯೂ ಗ್ರಾಪಂ ಮಟ್ಟದಲ್ಲಿ ಸಾವಿರಾರು ಇದೆ ಎನ್ನುವುದೂ ಉಲ್ಲೇಖನೀಯ.

ಪಾಸಿಟಿವ್ ಬಂದರೆ ಮತ್ತೆ ಟೆಸ್ಟ್!: ಪಂಚಾಯಿತಿ ವತಿಯಿಂದ ಮಾಡಲಾಗುವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ವರದಿ ಒಪ್ಪಿಕೊಳ್ಳಲು ಬಹುತೇಕ ಆರೋಗ್ಯವಂತರು ಸಿದ್ಧರಿರುವುದಿಲ್ಲ. ತಮಗೆ ಯಾವುದೇ ಲಕ್ಷಣಗಳಿಲ್ಲ, ಮತ್ತೆ ಪಾಸಿಟಿವ್ ವರದಿ ಬರಲು ಹೇಗೆ ಸಾಧ್ಯ ಎಂದು ಆಶಾ ಕಾರ್ಯಕರ್ತೆಯರನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಪಾಸಿಟಿವ್ ಹಿನ್ನೆಲೆಯಲ್ಲಿ ಮನೆ ಸೀಲ್‌ಡೌನ್ ಮಾಡಲೂ ಹಲವರು ಒಪ್ಪುವುದಿಲ್ಲ. ಖಾಸಗಿ ಲ್ಯಾಬ್‌ಗಳಿಗೆ ತೆರಳಿ ತಪಾಸಣೆ ಮಾಡಿಸುತ್ತಾರೆ. ಇದರಿಂದ ಪಾಸಿಟಿವ್ ಆಗಿರುವ ವ್ಯಕ್ತಿಯಿಂದ ಕೋವಿಡ್ ಹರಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಖಾಸಗಿಯಲ್ಲಿ ನೆಗೆಟಿವ್ ವರದಿ ಬಂದರೆ, ಆಶಾ ಕಾರ್ಯಕರ್ತೆಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ದಿನಕ್ಕೆ 75 ಮಂದಿಯ ಪರೀಕ್ಷೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ಆಶಾ, ಅಂಗನವಾಡಿ ಕಾರ್ಯಕರ್ತರು, ನರ್ಸ್‌ಗಳು ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದಾಗ ನಿರ್ಲಕ್ಷಿಸುವವರೇ ಹೆಚ್ಚು. ಕೆಲವು ದಿನ ನಾವೂ ಅವರೊಂದಿಗೆ ಹೋಗಬೇಕಾಗುತ್ತದೆ. ಸದ್ಯ ಮಳೆಗಾಲ. ಹೀಗಾಗಿ ಇತರ ಕೆಲಸವೂ ಇರುತ್ತದೆ. ಇವೆಲ್ಲದರ ನಡುವೆ ಗುರಿ ಸಾಧಿಸುವುದು ಕಷ್ಟ.

- ಹೆಸರು ಹೇಳಲು ಇಚ್ಛಿಸದ ಗ್ರಾಮ ಲೆಕ್ಕಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net