

ಗುಂಡ್ಲುಪೇಟೆ: ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಕೆಲವರಿಗೆ ವಾಂತಿ-ಬೇಧಿಯಾಗಿದ್ದರಿಂದ ಗುರುವಾರ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕುಡಿಯುವ ನೀರಿನ ಪರೀಕ್ಷೆ ನಡೆಸಿದರು.
ಶಿಂಡನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮದ ಐದಾರು ಜನರು ಬುಧವಾರ ವಾಂತಿ ಹಾಗೂ ಬೇಧಿಯಿಂದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಮಧುಸೂಧನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಪೈಪ್‌ಲೈನ್ ಹಾಗೂ ನೀರು ಸರಬರಾಜು ಮಾರ್ಗಗಳನ್ನು ಪರಿಶೀಲಿಸಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದರು. ಕಳೆದ ವಾರವೇ ಎಲ್ಲ ಟ್ಯಾಂಕ್‌ಗಳು ಹಾಗೂ ತೊಂಬೆಗಳನ್ನು ಶುಚಿಗೊಳಿಸಿದ್ದ ಬಗ್ಗೆ ಪ್ರಭಾರ ಪಿಡಿಒ ಮೋಹನ್‌ಕುಮಾರ್ ಮಾಹಿತಿ ನೀಡಿದರು.
ನೀರಿನ ಕಾರಣದಿಂದ ಯಾವುದೇ ಸಮಸ್ಯೆಯಾಗಿಲ್ಲ. ವಾಂತಿ ಮಾಡಿಕೊಂಡ ಎಲ್ಲರೂ ಬೇರೆ ಬೇರೆ ಕುಟುಂಬದವರಾಗಿದ್ದು ಬೇರೆ ಬೇರೆ ಕಡೆ ಆಹಾರ ಸೇವಿಸಿದ್ದರಿಂದ ಅನಾರೋಗ್ಯಕ್ಕೊಳಗಾಗಿದ್ದಾರೆ. ಮತ್ತೊಮ್ಮೆ ಎಲ್ಲ ಟ್ಯಾಂಕ್‌ಗಳಿಗೂ ಕ್ಲೋರೋನೇಷನ್ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ತಿಳಿಸಿದ್ದಾರೆ.