ವದ್ಧಿಕೆರೆ ಬಳಿ ಪರೀಕ್ಷಾರ್ಥ ವಿಮಾನ ಪತನ

CTD DRDO 20 (3)
Published on

ಐಮಂಗಲ: ವದ್ಧಿಕೆರೆ ಗ್ರಾಮದ ಸಮೀಪ ಮಾನವ ರಹಿತ ವಿಮಾನ (ಡ್ರೋಣ್) ತಾಂತ್ರಿಕ ತೊಂದರೆಯಿಂದ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ಪತನಗೊಂಡಿದೆ.

ವದ್ಧಿಕೆರೆಯಿಂದ ಗುಯಿಲಾಳು ಗ್ರಾಮಕ್ಕೆ ಹೋಗುವ ಬಂಡಿ ಜಾಡು ರಸ್ತೆಯಲ್ಲಿ ಬರುವ ಸಿದ್ದಪ್ಪ ಹಾಗೂ ಜಯಣ್ಣ ಎಂಬುವವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ.

ಚಳ್ಳಕೆರೆ ತಾಲೂಕಿನಲ್ಲಿರುವ ಡಿಆರ್‌ಡಿಒ ವತಿಯಿಂದ ಹಾರಿಸಲ್ಪಟ್ಟ ಈ ಮಾನವ ರಹಿತ ವಿಮಾನ ಬೆಳಗ್ಗೆ 8.15ಕ್ಕೆ ಪತನಗೊಂಡಿದ್ದು, ಇದಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ.

ಡ್ರೋಣ್ ಜಮೀನಿನಲ್ಲಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಹಳ್ಳಿಯ ಜನರು ತಂಡೋಪತಂಡವಾಗಿ ಆಗಮಿಸಿ ಪತನಗೊಂಡ ವಿಮಾನದ ಅವಷೇಶಗಳನ್ನು ಕುತೂಹಲದಿಂದ ನೋಡಿದರು. ವೃದ್ಧನೊಬ್ಬ ವಿಮಾನದ ಮೇಲೆ ಕುಳಿತು ತೀವ್ರ ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ಗಮನಸೆಳೆಯಿತು.

ಪ್ರತ್ಯಕ್ಷದರ್ಶಿ ಜಯಣ್ಣ ಹೇಳುವಂತೆ, ನಾನು ಹೊಲದಲ್ಲಿ ದಾಳಿಂಬೆ ಹಾಕಿದ್ದು, ಗಿಡಗಳಿಗೆ ಔಷಧ ಹೊಡೆಯುತ್ತಿದ್ದೆ, ಡಂ ಎಂಬ ಭಾರೀ ಶಬ್ದ ಕೇಳಿಬಂತು, ಏನೆಂದು ನೋಡುವಷ್ಟರಲ್ಲಿ ನೋಡ ನೋಡುತ್ತಿದ್ದಂತೆಯೇ ವಿಮಾನ ತುಂಡಾಗಿ ರೆಕ್ಕೆ ಒಂದು ಕಡೆ ಉಳಿದ ಭಾಗ ಇನ್ನೊದೆಡೆ ಬಿದ್ದಿತು ಎಂದು ಆತಂಕದಿಂದ ಮಾಹಿತಿ ನೀಡುತ್ತಿದ್ದರು.

ಎರಡು ತುಂಡು: ಡ್ರೋಣ್‌ನ ಎಡಭಾಗದ ರೆಕ್ಕೆ ಮತ್ತು ಇಂಜಿನ್ ಜಯಣ್ಣ ಎಂಬುವವರ ಜಮೀನಿನಲ್ಲಿ, ಉಳಿದರ್ಧ ಭಾಗ ಅರ್ಧ ಕಿ.ಮೀ. ದೂರದಲ್ಲಿ ಇರುವ ಸಿದ್ದಪ್ಪ ಅವರ ಜಮೀನಿನಲ್ಲಿ ಬಿದ್ದಿದೆ.

21 ಎಕರೆ ಜಮೀನು ಇದ್ದು ಅದರಲ್ಲಿ ಎರಡು ಎಕರೆ ಶೇಂಗಾ ಮತ್ತು ಅವರೆ ಹಾಕಲಾಗಿದೆ. ಅದರಲ್ಲಿ ವಿಮಾನ (ಡ್ರೋಣ್) ಪತನಗೊಂಡು ಬೆಳೆ ನಾಶವಾಗಿದೆ ಹಾಗೂ ಉಳಿದ ಜಮೀನಿನಲ್ಲಿ ಮಳೆ ಬಂದ ಕೂಡಲೆ ಕಡಲೆ ಬೆಳೆ ಹಾಕಬೇಕೆಂಬ ಉದ್ದೇಶದಿಂದ ಜಮೀನನ್ನು ಹಸನು ಮಾಡಿಕೊಂಡಿದ್ದೆವು. ಡ್ರೋಣ್ ನೋಡಲು ಸಾಗರೋಪಾದಿಯಲ್ಲಿ ಜನರು ದೌಡಾಯಿಸಿದ ಕಾರಣ ಮಾಗಿ ಮಾಡಿದ್ದ ಜಮೀನು ಹಾಳಾಗಿದೆ ಎಂದು ರೈತ ಸಿದ್ದಪ್ಪ ಅಳಲು ತೋಡಿಕೊಂಡರು.

ಸ್ಥಳಕ್ಕೆ ಬಂದ ಅಧಿಕಾರಿಗಳು: ವಿಷಯ ತಿಳಿಯುತ್ತಿದ್ದಂತೆ ಡಿಆರ್‌ಡಿಒ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪತನಗೊಂಡ ಮಾನವ ರಹಿತ ವಿಮಾನದ (ಡ್ರೋಣ್) ಅವಷೇಶಗಳನ್ನು ಪರಿಶೀಲಿಸಿದರು. ಆದರೆ, ಈ ಸಂಬಂಧ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.

ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ, ಸಿಪಿಐ ಕಾಂತರಾಜು, ಐಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ಅಶ್ವಿನಿ.ಎಂ.ಹಂಡಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net