

ಹುಬ್ಬಳ್ಳಿ : ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಯಾರೋ ಏನೋ ಹೇಳಿದರೆಂದು ಕುರುಡುನಂಬಿಕೆ ಬೇಡ. ಪರೀಕ್ಷಿಸಿ, ವಿಶ್ಲೇಷಿಸಿ ಒಪ್ಪಿಕೊಳ್ಳಬೇಕು ಎಂದು ಪವಾಡ ಸಂಶೋಧನಾ ಕೇಂದ್ರದ ಕಾರ್ಯಕರ್ತ ಮಂಜುನಾಥ ಬಾರಕೇರ ಹೇಳಿದರು.
ಡಿ.ಎಸ್.ಇ.ಆರ್.ಟಿ ಸಹಯೋಗದಲ್ಲಿ ಇಂಡಿಯಾ ಫಾಂಡೇಶನ್ ಫಾರ್ ಆರ್ಟ್ಸ್, ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆವರಣದ ಕಲಿಕಾ ಕೇಂದ್ರವಾಗಿ ಅರಳೀಕಟ್ಟೆ ತೆರೆದ ವಾಚನಾಲಯ ಅಡಿಯಲ್ಲಿ ಪವಾಡ ರಹಸ್ಯಗಳನ್ನು ಬೇಧಿಸಿ ಅವರು ಮಾತನಾಡಿದರು.
ನಮ್ಮ ವಿವೇಚನೆಯೇ ಇಂದಿನ ದೊಡ್ಡ ಶಕ್ತಿ. ನಮ್ಮ ಮನಸ್ಸಿನಲ್ಲಿರುವ ಮೌಢ್ಯತೆಯ ಮಾರಿಯನ್ನು ಹೊರದೂಡೋಣ. ಹೊಸ ವಿವೇಚನಾಯುಕ್ತ, ವೈಚಾರಿಕ ನಾಡು ಕಟ್ಟೋಣ ಎಂದರು.
ನಂಬಿಕೆ ಇರಬೇಕು. ಅದು ಮೌಢ್ಯವಾಗಿರಬಾರದು. ಮೂಢ ನಂಬಿಕೆಗಳು ಮಾನಹಾನಿ, ಪ್ರಾಣಹಾನಿ, ಧನಹಾನಿಗಳನ್ನು ಉಂಟು ಮಾಡುತ್ತವೆ. ವೈಜ್ಞಾನಿಕ ಆಲೋಚನೆ ಮಾಡುವುದರಿಂದ ನಮ್ಮ ಜೀವನ ಸತ್ಯವೂ, ಸುಂದರವೂ ಆಗುವುದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅರಳೀಕಟ್ಟೆಯ ಸಂಚಾಲಕ ಡಾ.ಲಿಂಗರಾಜ ರಾಮಾಪೂರ, ವಿಜ್ಞಾನ ಕೇವಲ ಶಾಲೆಯಲ್ಲಿ ಕಲಿಯುವ ಒಂದು ವಿಷಯವಲ್ಲ. ಅದು ನಮ್ಮ ಜೀವನವನ್ನು ಸುಂದರಗೊಳಿಸುವ ಒಂದು ವಿಧಾನ. ಪವಾಡಗಳು ಕೇವಲ ಮ್ಯಾಜಿಕ್ ಅಷ್ಟೇ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಶಿಕ್ಷಕಿ ಜಯಶ್ರೀ ಎಂ. ಮಾತನಾಡಿ, ನೋಡಿದ್ದು, ಕೇಳಿದ್ದೆಲ್ಲವೂ ಸತ್ಯವಾಗಿರಲಾರದು. ವಿಚಾರಿಸಿ, ಪರೀಕ್ಷಿಸಿ, ಪರಿಶೀಲಿಸಿ ನಂಬಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದ ಮಂಗಳಾ ಕಮ್ಮಾರ, ಸುಲೋಚನಾ ಬೆಳಗಾವಿ, ಚಂದ್ರಶೇಖರ ಶೀಪರಮಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.