

ಚಿಕ್ಕಮಗಳೂರು: ಉಗ್ರವಾದಿಗಳು ಹೇಳಿದಂತೆ ತಲೆದೂಗಿ ಮಣೆ ಹಾಕಿ ಅವರ ಪರವಾಗಿ ನಿಲ್ಲುವ ರಾಜಕೀಯ ವ್ಯವಸ್ಥೆ ಈಗಿಲ್ಲ. ಈಗೇನಿದ್ದರೂ ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಬಾಲ ಬಿಚ್ಚಿದವರ ಬಾಲ ಹಾಗೂ ತಲೆಯನ್ನು ಕಟ್ ಮಾಡಿದ್ದೇವೆ. ಯಾವುದೇ ರೀತಿಯ ದೇಶ ವಿರೋಧಿ ಚಟುವಟಿಕೆ ನಾವು ಸಹಿಸುವುದಿಲ್ಲ. ಅದನ್ನು ಒಪ್ಪಿಕೊಳ್ಳುವಂತಹ ಸಮಾಜ ವ್ಯವಸ್ಥೆ ಸಹ ಈಗಿಲ್ಲ ಎಂದರು.
ಉಗ್ರವಾದಕ್ಕೆ ದೇಶದಲ್ಲಿ ಜಾಗವಿಲ್ಲ
ಮಂಗಳೂರಿನ ಅಪಾರ್ಟ್‍ಮೆಂಟ್ ಕಾಪೌಂಡ್ ಮೇಲೆ ಲಷ್ಕರ್ ಉಗ್ರರ ಪರವಾಗಿ ಸಂದೇಶ ಬರೆದ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಉಗ್ರವಾದಕ್ಕೆ ದೇಶದಲ್ಲಿ ಜಾಗವಿಲ್ಲ. ಅವರು ಇಲ್ಲಿಯೂ ಬಾಲ ಬಿಚ್ಚಿದರೆ ಬರೇ ಬಾಲ ಮಾತ್ರವಲ್ಲ. ಉಳಿದದ್ದೂ ಕಟ್ ಆಗುತ್ತದೆ ಎನ್ನುವುದನ್ನು ಎಚ್ಚರದಲ್ಲಿಟ್ಟುಕೊಳ್ಳಬೇಕು. ಉಗ್ರವಾದಿಗಳು ಹೋಗಬೇಕಿರುವುದು ಸ್ಮಶಾನಕ್ಕೆ ಮಾತ್ರ. ಅವರನ್ನು ಖಬರಸ್ತಾನಕ್ಕೆ ಕಳಿಸುವ ಕೆಲಸವನ್ನು ನಮ್ಮ ಪೆÇಲೀಸರು ಹಾಗೂ ನಮ್ಮ ಸೇನೆ ಸಮರ್ಥವಾಗಿ ನಿರ್ವಹಿಸುತ್ತಿದೆ. ಉಗ್ರವಾದಿಗಳಿಗೆ ಬಿರಿಯಾನಿ ಕೊಡುವ ಕಾಲ ಹೋಯಿತು ಎಂದು ತೀಕ್ಷ್ಣವಾಗಿ ಹೇಳಿದರು.
ದೂರು ಬಂದಿರುವ ಕಡೆ ಮೌನವೇಕೆ?
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನಿಸಲು ವೀಡಿಯೊ ಕಾರಣ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದನ್ನು ಪ್ರಶ್ನೆ ಮಾಡಲು ಬಂದಿರುವ ತಾವು ತಮ್ಮದೇ ಪಕ್ಷದ ದಲಿತ ಶಾಸಕರ ಮನೆಗೆ ಬೆಂಕಿ ಹಾಕಿದವರ ಪರ ರಕ್ಷಣೆಯ ಮಾತನಾಡುತ್ತೀರಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ಬುಕ್ ಆಗಿದೆ. ತಮ್ಮದೇ ಪಕ್ಷದ ಶಾಸಕರು ನನ್ನ ಮನೆಗೆ ಬೆಂಕಿ ಹಾಕಿಸಲು ಕಾರಣವೇ ಅವರು ಎಂದು ದೂರು ಕೊಟ್ಟಿದ್ದರೂ ಅವರ ವಿರುದ್ಧ ಏನೂ ಕ್ರಮ ತೆಗೆದುಕೊಂಡಿಲ್ಲ. ಆದರೆ ಸಂತೋಷ್ ಆತ್ಮಹತ್ಯೆ ಪ್ರಕರಣ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ತನಿಖೆ ಬಳಿಕವಷ್ಟೇ ನಿಜಾಂಶ ಗೊತ್ತಾಗಬೇಕು. ಅದಕ್ಕೂ ಮುನ್ನವೇ ಆರೋಪ ಹೊರಿಸಲು ಮುಂದಾಗಿದ್ದಾರೆ. ದೂರು ಬಂದಿರುವ ಕಡೆ ಯಾಕೆ ಸುಮ್ಮನಿದ್ದಾರೆ, ಯಾಕೆ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಪಕ್ಷದ ರಾಜ್ಯ ವಿಚಾರಕ್ಕೆ ತಲೆಹಾಕಲ್ಲ
ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಪಕ್ಷದ ಸೂಚನೆ ಇಲ್ಲದೆ ತಲೆ ಹಾಕುವುದಿಲ್ಲ ಎಂದು ಸ್ವಯಂ ನಿರ್ಣಯ ತೆಗೆದುಕೊಂಡಿರುವುದಾಗಿ ಹೇಳಿದ ಅವರು, ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಸಿಂಗ್ ಇದ್ದು, ಸಮರ್ಥರಾಗಿರುವ ಅವರು ಸಿಎಂ ಹಾಗೂ ರಾಜ್ಯಾಧ್ಯಕ್ಷರ ಜತೆ ಸಮಾಲೋಚನೆ ನಡೆಸಿ ಕರ್ನಾಟಕದಲ್ಲಿ ಪಕ್ಷದ ವಿದ್ಯಮಾನಕ್ಕೆ ಅಗತ್ಯ ಸಲಹೆ ಸೂಚನೆ ನೀಡುತ್ತಾರೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ನಮ್ಮನ್ನು ಪಕ್ಷದೊಳಗಿನಿಂದ ಯಾರಾದರೂ ಕೇಳಿದರೆ ನನಗಿರುವ ಅನುಭವದ ಮೇಲೆ ಎಲ್ಲಿ ಏನು ಹೇಳಬೇಕೊ ಅಲ್ಲಿ ಹೇಳುವುದಾಗಿ ತಿಳಿಸಿದರು.