

ಹುಬ್ಬಳ್ಳಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ದಾಳಿ ಮಾಡಿದ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಆತಂಕವಾದಿಗಳನ್ನು ಹಿಡಿದು ಇಂಡಿಯಾ ಗೇಟ್ ಮುಂದೆ ಬೆತ್ತಲೆ ಮಾಡಿ ಸುಡಬೇಕು ಇಲ್ಲವೇ ಎನ್ಕೌಂಟರ್ ಮಾಡಬೇಕು ಎಂದು ಟಿಪ್ಪು ಸುಲ್ತಾನ್ ವಂಶಸ್ಥ ಸೈಯದ್ ಮನ್ಸೂರ್ ಅಲಿ ಟಿಪ್ಪು ಸುಲ್ತಾನ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರಾನ್ ಯಾರನ್ನೂ ಹತ್ಯೆ ಮಾಡಬಾರದು ಮತ್ತು ನಿಂದನೆ ಮಾಡಬಾರದು ಎಂದು ಹೇಳುತ್ತದೆ. ಆದರೆ ಈ ಉಗ್ರರಿಗೂ ನಮ್ಮ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಕಾಶ್ಮೀರ ಅಟ್ಯಾಲ್ ವೇಳೆ ಅನೇಕ ಮುಸ್ಲಿಮರು ಅಪಾಯದಲ್ಲಿರುವ ಜನರನ್ನು ರಕ್ಷಿಸಿದ್ದಾರೆ. ಆದರೆ, ಇದೀಗ ಕೆಲವರು ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಂಡು ಜಾತಿ ತಂದೊಡ್ಡುತ್ತಿರುವುದಕ್ಕೆ ಖಂಡಿಸಿದ್ದಾರೆ.
ಕೇಂದ್ರ ಸರ್ಕಾರ ಪಾಕಿಸ್ತಾನ ವಿರುದ್ಧ ಕೈಗೊಳ್ಳುವ ನಿರ್ಣಯಗಳಿಗೆ ಬದ್ಧನಾಗಿದ್ದೇನೆ. ಸರ್ಕಾರದ ಜತೆಗೂ ನಾನಿದ್ದೇನೆ. ಒಂದು ವೇಳೆ ಯುದ್ಧವಾದಲ್ಲಿ, ನಾನು ಕೂಡಾ ಯುದ್ಧ ಭೂಮಿಗೆ ತೆರಳಿ ಹೋರಾಟ ಮಾಡಲು ಸಿದ್ಧನಿದ್ದೇನೆ. ಯುದ್ಧ ಮಾಡುವುದರಿಂದ ರಾಷ್ಟ್ರಕ್ಕೆ ಅಪಾರ ಪ್ರಮಾಣ ನಷ್ಟ ಉಂಟಾಗಲಿದೆ. ಆದರೂ ರಾಷ್ಟ್ರದ ಗೌರವಕ್ಕೆ ಧಕ್ಕೆ ಬಂದಾಗ ಯುದ್ಧ ಅನಿವಾರ್ಯವಾಗಲಿದೆ ಎಂದರು.
ಕಾಳಜಿ ಇಲ್ಲ: ನಮ್ಮ ತಾತನ ಹೆಸರು ಹೇಳಿಕೊಂಡು ರಾಜ್ಯದಲ್ಲಿ ಅನೇಕರು ರಾಜಕೀಯ ಮಾಡಿ, ಶಾಸಕರು, ಸಚಿವರಾಗಿದ್ದಾರೆ, ಆದರೆ, ಈವರೆಗೆ ಟಿಪ್ಪು ಸುಲ್ತಾನ್ ಅವರಿಗೆ ರಾಜಕಾರಣಿಗಳು, ಸರ್ಕಾರ ಏನು ಮಾಡಿದೆ? ಅವರ ಕುಟುಂಬ ಹೇಗಿದೆ? ಎಂಬ ಬಗ್ಗೆ ಯಾರೂ ಕೇಳಿಲ್ಲ. ಟಿಪ್ಪು ಸುಲ್ತಾನ್ ವಕ್ಫ್‌ಗೆ 600 ಎಕರೆ ಜಾಗ ಕೊಟ್ಟಿದ್ದಾರೆ. ಆದರೆ ಅದನ್ನೇ ರಾಜಕಾರಣಿಗಳು ಎನ್‌ಒಸಿ ಮಾಡಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಸಮಾಧಿ, ಗುಂಬಜ್ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಟಿಪ್ಪು ಜಯಂತಿ ಬಂದಾಗ ಸರ್ಕಾರಕ್ಕೆ ಒಂದು ಟ್ವೀಟ್ ಮಾಡಲು ಕೂಡ ಆಗುವುದಿಲ್ಲ. ಹಾಗಾಗಿ ಕಡ್ಡಾಯವಾಗಿ ರಾಜ್ಯಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸಂಚರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.