ಬಳ್ಳಾರಿ ; ಕಾಶ್ಮೀರದ ಕಣಿವೆಯ ಪಹಲ್ಗಾಮ್‌ನಲ್ಲಿ ಹಿಂದುಗಳ ಮೇಲೆ ಉಗ್ರರ ದಾಳಿ ಖಂಡಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರ ಹತ್ಯೆಯಾಗಿದೆ. ಹಲವಾರು ಜನರು ಗಾಯಗೊಂಡಿದ್ದಾರೆ. ಈ ಕ್ರೂರ ಹಿಂಸಾಚಾರದ ಕೃತ್ಯವು ಮಾನವೀಯತೆ, ಶಾಂತಿ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಅವಮಾನವಾಗಿದೆ. ಇಂತಹ ಘೋರ ಕೃತ್ಯಗಳಿಗೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಇಂತಹ ಕೃತ್ಯಗಳನ್ನು ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಖಂಡಿಸುತ್ತದೆ ಎಂದು ತಿಳಿಸಿದರು.
ಎಲ್ಲ ಭಾರತೀಯರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಶಾಂತಿ, ನ್ಯಾಯ, ಜಾತ್ಯತೀತತೆ ಮತ್ತು ಏಕತೆಯ ಮೌಲ್ಯಗಳಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ದಾಳಿಯ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಗೆ ನಿರ್ದೇಶಿಬೇಕು. ಅಪರಾಧಿಗಳನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.