ಶಾರೀಕ್ ಮೇಲೆ ಲುಕ್‌ಔಟ್ ನೋಟಿಸ್ ಜಾರಿ

23 smg 5
Published on

ಶಿವಮೊಗ್ಗ: ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೊಪ್ಪುಗುಡ್ಡೆಯ ಶಾರೀಕ್ ಮೇಲೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ನಡುವೆ ಬಂಧಿತರಿಬ್ಬರು ಐಸಿಸ್‌ನ ನೇರ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಸಂಘಟನೆಯಿಂದ ಪ್ರಭಾವಿತರಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ತಿಳಿಸಿದರು.

ಉಗ್ರ ಚಟುವಟಕೆಗಳನ್ನು ಮುಂದಾಗಿದ್ದ ಆರೋಪದಲ್ಲಿ ಈಗಾಗಲೇ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸೈಯದ್ ಯಾಸೀನ್ ಅಲಿಯಾಸ್ ಬೈಲು ಎಂಬಾತನನ್ನು ಬಂಧಿಸಿದ್ದು ಸೆ.29ರವರೆಗೆ ಪೊಲೀಸ್ ವಶಕ್ಕೆ ಪಡೆದಿದ್ದೇವೆ. ಪ್ರಮುಖ ಆರೋಪಿ ಶಾರೀಕ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಂಧಿತರು ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿಲ್ಲ. ಶಾರೀಕ್ ಸಿಕ್ಕ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ. ಈಗಾಗಲೇ ಯುಎಪಿಎ(ಅನ್‌ಲಾಫುಲ್ ಅಕ್ಟಿವಿಟೀಸ್ ಪ್ರಿವೆಂಶನ್ ಆಕ್ಟ್)ದಡಿ ಕೇಸ್ ದಾಖಲಿಸಿಕೊಂಡಿದ್ದು ತೀರ್ಥಹಳ್ಳಿ ಡಿವೈಎಸ್ಪಿ ಈ.ಶಾಂತವೀರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಬಂಧಿತರಿಂದ ಮೊಬೈಲ್, ಲ್ಯಾಪ್‌ಟಾಪ್, ಡಾಂಗಲ್, ಪೆನ್‌ಡ್ರೈವ್, ಎಲೆಕ್ಟ್ರಾನಿಕ್ ವಸ್ತುಗಳು, ಕೆಲ ದಾಖಲಾತಿಗಳು, ಬಾಂಬ್‌ನ ಅವಶೇಷಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.

ರಾಷ್ಟ್ರಧ್ವಜ ಅರೆಬರೆ ಸುಟ್ಟು ವಿಕೃತಿ:

ಶಂಕಿತ ಉಗ್ರರಾದ ಯಾಸೀನ್ ಮತ್ತು ಮಾಜ್ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರೃ ನಂತರ ಗುರುಪುರದ ತುಂಗಾನದಿ ದಡದ ಕೆಮ್ಮನಗುಂಡಿಯಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದರು. ಸ್ಫೋಟವು ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಜಿಹಾದ್ ನಡೆಸಲು ಗುರುಪುರದ ಮನೆ ಮತ್ತು ಮಂಗಳೂರಿನಲ್ಲಿ ಮತ್ತಷ್ಟು ಸ್ಫೋಟಕಗಳನ್ನು ಸಂಗ್ರಹಿಸಿದ್ದರು. ಆರೋಪಿಗಳು ಬಾಂಬ್ ಸ್ಫೋಟಿಸಿದ ಜಾಗದಲ್ಲಿ ರಾಷ್ಟ್ರಧ್ವಜವನ್ನು ಅರೆಬರೆ ಸುಟ್ಟಿದ್ದಲ್ಲದೆ, ಮೊಬೈಲ್‌ನಲ್ಲಿ ರೇಕಾರ್ಡ್ ಮಾಡಿಕೊಂಡು ವಿಕೃತಿ ಮೆರೆದಿದ್ದಾರೆ. ಆ ವೀಡಿಯೋ ಕೂಡ ಆರೋಪಿಗಳ ಮೊಬೈಲ್‌ನಲ್ಲಿ ಪತ್ತೆಯಾಗಿವೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net