

ಬೇಲೂರು: ಎಲ್ಲ ಧರ್ಮಗಳು, ಪ್ರೀತಿ ಮತ್ತು ಶಾಂತಿ ಸಾಮರಸ್ಯ, ಸೌಹಾದರ್ ಸಂದೇಶ ನೀಡುತ್ತಿವೆ ಹೊರತು, ಕೊಲ್ಲು ಎಂದು ಎಲ್ಲೂ ಹೇಳಿಲ್ಲ, ಆದ್ದರಿಂದ ಆಶಾಂತಿಗೆ ಕಾರಣವಾಗಿರುವ ಭಯೋತ್ಪಾದನೆ, ಉಗ್ರ ಚಟುವಟಿಕೆ ಮೊದಲು ನಿಲ್ಲಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಗೋವಿನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಭಗವಾನ್ ಬುದ್ಧ ಹಾಗೂ ಬಸವಣ್ಣನವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ನಮ್ಮಂತಹ ಸ್ವಾಮೀಜಿಗಳು ಇತ್ತೀಚಿನ ದಿನದಲ್ಲಿ ಮಾತನಾಡುವುದು ಕಷ್ಟವಾಗಿದೆ. ಪರಿಪೂರ್ಣವಾದ ಮಾತನ್ನು ತಮಗೆ ಬೇಕಾದ ರೀತಿಯಲ್ಲಿ ವೈರಲ್ ಮಾಡುವುದರಿಂದ ನಮಗೆ ಕೊಲೆ ಬೆದರಿಕೆ ಹಾಕುತ್ತಾರೆ. ನಾವು ಯಾವ ಕಾರಣಕ್ಕೂ ಸಾವಿಗೆ ಹೆದರವುದಿಲ್ಲ, ಇರುವಷ್ಟು ದಿನ ಸಮಾಜದಲ್ಲಿ ಅಡಗಿರುವ ಮೌಢ್ಯ, ಜಾತಿ-ಧರ್ಮಗಳ ನಡುವಿನ ಸಂಘರ್ಷ ಮತ್ತು ಕಾಯಕ ಪ್ರಜ್ಞೆಯ ಬಗ್ಗೆ ಮಾತನಾಡುತ್ತೇವೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮ ಸಂಘರ್ಷ ಹೆಚ್ಚಾಗುತ್ತಿದೆ. ಇದನ್ನು ಪರಿಹರಿಸಿ ಕಲ್ಯಾಣ ರಾಜ್ಯ ಸ್ಥಾಪನೆಗಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ಸಂದೇಶಗಳು ಪ್ರಾಮುಖ್ಯತೆ ವಹಿಸಲಿವೆ. ಇಂದು ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಅಲ್ಲದೆ ಯುವ ಜನತೆ ಸಂಸ್ಕಾರ-ಸಂಸ್ಕೃತಿಯಿಂದ ಹೊರ ಬಂದು ದುಶ್ಚಟಗಳಿಗೆ ದಾಸಾರಾಗುತ್ತಿದ್ದಾರೆ. ದಯೆ ಇಲ್ಲದ ಧರ್ಮ ಯಾವುದು ಎಂದು ಪ್ರಶ್ನೆ ಮಾಡಿದ ವಿಶ್ವಗುರು ಬಸವಣ್ಣನವರು ಮತ್ತು ಜಗತ್ತಿಗೆ ಬೆಳಕು ನೀಡಿದ ಗೌತಮಬುದ್ಧ ಹಾಗೂ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಗೋವಿನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಮನುಕುಲದ ಸರ್ವತೋಮುಖ ಉದ್ಧಾರಕ್ಕಾಗಿ ಜಗತ್ತಿನಲ್ಲಿ ನೂರಾರು ಮಾಹಾನ್ ಪುರುಷರು ಜನಿಸಿದ ಪುಣ್ಯ ಭೂಮಿ ಭಾರತ. ಅದರಲ್ಲಿ ಪ್ರಮುಖವಾಗಿ ವಿಶ್ವಕ್ಕೆ ದಾರ್ಶನಿಕತೆಯಲ್ಲಿ ಮುಖ್ಯವಾದ ಬುದ್ಧ, ಬಸವ, ಅಂಬೇಡ್ಕರ್ ಅವರ ಪುತ್ಥಳಿಯನ್ನು ನನ್ನ ಕ್ಷೇತ್ರದ ಗೋವಿನಹಳ್ಳಿಯಲ್ಲಿ ಸ್ಥಾಪಿಸಿರುವುದು ಸಂತೋಷವಾಗಿದೆ. ಈ ಮೂವರು ದಾರ್ಶನಿಕರು ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಕ್ಕೆ ಆರ್ಥ ಬರುತ್ತದೆ ಎಂದರು.
ಬೆಂಗಳೂರು ಸ್ಫೂರ್ತಿಧಾಮ ದಮ್ಮವೀರ ಬಂತೇಜಿ, ಮುಖಂಡರಾದ ಅನಿಲ್ ಕುಮಾರ್, ಪರ್ವತಯ್ಯ, ಸಿ.ಎನ್.ದಾನಿ, ಗೋವಿನಹಳ್ಳಿ ರವಿ, ಬಳ್ಳೂರು ಉಮೇಶ್, ನೂರ್ ಅಹಮದ್, ಶರತ್, ಮಂಜುನಾಥ್ ಇತರರಿದ್ದರು.