

ಬೆಂಗಳೂರು: ಹಿಂದುಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ಹತ್ಯೆಮಾಡುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಎ ದರ್ಜೆಯ ಉಗ್ರ, ಈಚೆಗೆ ಸೆರೆಸಿಕ್ಕ ತಾಲಿಬ್ ಹುಸೇನ್ ಕೆಲ ಕಾಲ ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಹಮಾಲಿಯಾಗಿದ್ದ...!
ಜಮ್ಮು-ಕಾಶ್ಮೀರದಿಂದ ಪರಾರಿಯಾಗಿ ರಾಜಧಾನಿಯಲ್ಲಿ ನೆಲೆ ಕಂಡುಕೊಳ್ಳಲು ಬಂದಿದ್ದ ಈತನಿಗೆ ಮೊದಲಿಗೆ ಆಶ್ರಯ ಕೊಟ್ಟಿದ್ದು ಸಿಟಿ ರೈಲು ನಿಲ್ದಾಣ. ಬಳಿಕ ಗೂಡ್ಸ್ ಚಾಲಕನಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಶ್ರೀರಾಂಪುರದ ಮಸೀದಿ ಸಮೀಪದ ಕೊಠಡಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳ ಜತೆ ವಾಸವಿದ್ದ ತಾಲಿಬ್ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿದ್ದ ವಿಚಾರ ಬಯಲಾಗಿದೆ.
ಜಮ್ಮು-ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಜೂನ್ 5ರಂದು ಶ್ರೀರಾಂಪುರದಲ್ಲಿ ತಾಲಿಬ್ ಹುಸೇನ್ನನ್ನು ಬಂಧಿಸಿವೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿ 2016ರಿಂದ ಸಕ್ರಿಯನಾಗಿದ್ದ ತಾಲಿಬ್, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಗುತ್ತಿದಂತೆ ಅಲ್ಲಿಂದ ಪಲಾಯನಗೈದು 2019ರಲ್ಲಿ ಬೆಂಗಳೂರಿಗೆ ಬಂದು ತಾರಿಕ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಶ್ರೀರಾಂಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಗೂಡ್ಸ್ ಆಟೋ ಚಾಲಕನಾಗಿದ್ದ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಪಾರ್ಸೆಲ್ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಗೂಡ್ಸ್ ಶೆಡ್ ರಸ್ತೆ ಪಾರ್ಸೆಲ್ ವಿಭಾಗಕ್ಕೆ ಹೋಗಿ ಬರುತ್ತಿದ್ದ.
ಬಾಡಿಗೆ ಮನೆ ಗಿಟ್ಟಿಸಿದ: ಕೆಲವೇ ದಿನಕ್ಕೆ ತನ್ನದೆ ಧರ್ವಿುಯರ ಸಹಾಯದಿಂದ ಪುರುಷೋತ್ತಮ್ ಎಂಬುವರ ಕಟ್ಟಡದಲ್ಲಿ 10 ಸಾವಿರ ರೂ. ಮುಂಗಡ, 3 ಸಾವಿರ ರೂ. ಬಾಡಿಗೆ ಮತ್ತು 500 ರೂ. ವಿದ್ಯುತ್, ನೀರಿನ ಬಿಲ್ ಕೊಡುವುದಾಗಿ ಮನೆ ಬಾಡಿಗೆ ಪಡೆದಿದ್ದ.
ಮನೆ ಮಾಲೀಕರು, ಬ್ಯಾಚುಲರ್ಗೆ ಬಾಡಿಗೆ ಕೊಡುವುದಿಲ್ಲ ಎಂದಾಗ ಹೆರಿಗೆ ಸಲುವಾಗಿ ಪತ್ನಿ ತವರು ಮನೆಯಲ್ಲಿದ್ದು, ಶೀಘ್ರದಲ್ಲೇ ಕರೆ ತರುವೆ ಎಂದು ಹೇಳಿದ್ದ. ಇದಾದ ಮೇಲೆ ಸ್ವಲ್ಪ ದಿನಕ್ಕೆ ಇಬ್ಬರು ಮಕ್ಕಳೊಂದಿಗೆ ಪತ್ನಿಯನ್ನು ಕರೆತಂದು ಜೀವನ ಸಾಗಿಸುತ್ತಿದ್ದ.
ಮಸೀದಿ ಪಕ್ಕದ ಕೊಠಡಿಗೆ ಸ್ಥಳಾಂತರ: ಶ್ರೀರಾಂಪುರದಲ್ಲಿರುವ ಮಸೀದಿಗೆ ಪ್ರಾರ್ಥನೆಗೆ ಹೋಗಿ ಬರುವಾಗ ಅಲ್ಲಿನವರ ಸ್ನೇಹ ಬೆಳೆಸಿ ಸಭ್ಯವ್ಯಕ್ತಿ ಎಂದು ಗುರುತಿಸಿಕೊಂಡಿದ್ದ. ಕರೊನಾ 2ನೇ ಅಲೆ ವೇಳೆ ಶ್ರೀರಾಂಪುರದ ದಿ ಓಕಳಿಪುರಂ ಮಜ್ದಾರ್ ಮಸೀದಿಯಿಂದ ಬಡವರಿಗೆ ಆಹಾರ ವಿತರಿಸುತ್ತಿದ್ದಾಗ ಅವರೊಂದಿಗೆ ಕೈ ಜೋಡಿಸಿ ಮತ್ತಷ್ಟು ಹತ್ತಿರನಾಗಿದ್ದ. ಅದೇ ವೇಳೆ ಪತ್ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 3ನೇ ಮಗು ಹೆರಿಗೆ ಆಗಿತ್ತು. ಕರೊನಾ ಲಾಕ್ಡೌನ್ನಿಂದ ಕೆಲಸ ಇಲ್ಲ. ಬರುವ ಸಂಬಳ ಸಾಕಾಗುತ್ತಿಲ್ಲ. ಪತ್ನಿಗೆ ಹೆರಿಗೆ ಆಗಿದೆ. ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ತನ್ನ ಧರ್ವಿುಯರ ಬಳಿ ಅಳಲು ತೋಡಿಕೊಂಡಿದ್ದ. ಮುಸ್ಲಿಂ ಮುಖಂಡರು, ಮಸೀದಿಗೆ ಹೊಂದಿಕೊಂಡಂತೆ ಇದ್ದ ಸಣ್ಣ ಕೊಠಡಿಯಲ್ಲಿ ಆಶ್ರಯ ಕೊಟ್ಟಿದ್ದರು. ಎಂಟು ತಿಂಗಳಿಂದ ಅಲ್ಲಿಯೇ ಉಳಿದುಕೊಂಡಿದ್ದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ.