ಕೃಷ್ಣಾ ತೀರದಲ್ಲಿ ನಿವೃತ್ತ ನೌಕರನ ಭೀಕರ ಹತ್ಯೆ, ಆಸ್ತಿ ವಿವಾರ ಹಿನ್ನೆಲೆ ಕುತ್ತಿಗೆಗೆ ವೈಯರ್ ಬಿಗಿದು ಕೊಲೆ, ಹತ್ತು ಆರೋಪಿಗಳ ಬಂಧನ

SP OFFICE vijayapur
ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ.
Published on

ವಿಜಯಪುರ: ಕೃಷ್ಣಾ ತೀರದ ಕೊಲ್ಹಾರ ಸೇತುವೆ ಬಳಿ ಪತ್ತೆಯಾಗಿದ್ದ ನಿವೃತ್ತ ನೌಕರನ ಶವದ ಹಿಂದೆ ರೋಚಕ ಕಥಾನಕವಿದ್ದು, ಬಂಧನಕ್ಕೆ ಒಳಗಾದ ಆರೋಪಿಗಳು ತನಿಖೆ ವೇಳೆ ಬಿಚ್ಚಿಟ್ಟ ವಿವರ ಬೆಚ್ಚಿಬೀಳಿಸುವಂತಿದೆ.

ಅ. 6ರಂದು ಕೊಲ್ಹಾರದ ಸೇತುವೆ ಕೆಳಗಡೆ ಶವವೊಂದು ಪತ್ತೆಯಾಗಿತ್ತು. ಕೊಲೆಯಾದ ವ್ಯಕ್ತಿ ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮದ ಮಹೇಶ ಮಳಯ್ಯ ಪೂಜಾರಿ (65) ಎಂಬುದು ಗೊತ್ತಾಗಿತ್ತು. ಆದರೆ, ಈ ಕೊಲೆ ಹಿಂದೆ ಆಸ್ತಿ ವಿವಾದ ಇರುವುದು ಮತ್ತು ಸಂಬಂಧಿಕರೇ ಅಪಹರಿಸಿ, ಕಾರ್‌ನಲ್ಲಿ ಕರೆದ್ಯೊಯ್ದು, ಕುತ್ತಿಗೆಗೆ ವೈಯರ್‌ನಿಂದ ಬಿಗಿದು ಭೀಕರವಾಗಿ ಹತ್ಯೆಗೈದಿರುವುದು ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ.

ಪ್ರಕರಣದ ಹಿನ್ನೆಲೆ

ತೊನಶ್ಯಾಳ ಗ್ರಾಮದ ಮಹೇಶ ಮಳಯ್ಯ ಪೂಜಾರಿ ಮಹಾರಾಷ್ಟ್ರದ ಪುಣೆಯ ವಿಮಾನ ನಗರ ರೋ ಹೌಸ್-1 ಶೃದ್ಧಾ ಟೆರೆಸ್ ಸೊಸಾಯಿಟಿಯಲ್ಲಿ ಮಗಳ ಜೊತೆ ವಾಸವಾಗಿದ್ದರು. ಮಹೇಶನಿಗೆ ಐವರು ಸಹೋದರರಿದ್ದು, ತೊನಶ್ಯಾಳದಲಿಯೇ ಆಸ್ತಿ ಇತ್ತು. ಆದರೆ, ಆಸ್ತಿ ವಿವಾದ ಹಿನ್ನೆಲೆ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಹೀಗಾಗಿ ಆಗಾಗ ತೊನಶ್ಯಾಳ ಮತ್ತು ವಿಜಯಪುರದ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದರು. ಹೀಗಿರುವಾಗ 2024 ಅ. 4ರಂದು ವಿಜಯಪುರಕ್ಕೆ ಆಗಮಿಸಿದ್ದ ಮಹೇಶ ಅವರನ್ನು ಕೋರ್ಟ್ ಹತ್ತಿರ ಕಾರ್‌ನಲ್ಲಿ ಅಪಹರಿಸಲಾಗಿತ್ತು. ಈ ಬಗ್ಗೆ ಮಹೇಶನ ಅಣ್ಣನ ಮಗ ಸತೀಶ ಜಲನಗರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ಶವವಾಗಿ ಪತ್ತೆ

ಕೋರ್ಟ್ ಕೇಸ್ ಹಿನ್ನೆಲೆ ಆಗಮಿಸಿದ್ದ ಮಹೇಶ ವಕೀಲರನ್ನು ಭೇಟಿಯಾಗಲೆಂದು ಕೋರ್ಟ್ ಬಳಿ ನಿಂತಿದ್ದ ವೇಳೆ ವ್ಯಕ್ತಿಯೋರ್ವ ರಾಘವೇಂದ್ರ ಮಠದ ಹತ್ತಿರ ಕರೆದೊಯ್ದಿದ್ದನು. ಅಲ್ಲಿಗೆ ಬಂದ ಬಿಳಿ ಬಣ್ಣದ ಸ್ವಿಫ್ಟ್ ಕಾರ್‌ನಲ್ಲಿ ಮಹೇಶನನ್ನು ಬಲವಂತದಿಂದ ಎತ್ತಿ ಹಾಕಿದ್ದರು. ಆಗ ಜೊತೆಗಿದ್ದ ವ್ಯಕ್ತಿ ಕಲ್ಲಿನಿಂದ ಕಾರ್ ಗಾಜಿಗೆ ಹೊಡೆದಿದ್ದರು. ರಭಸದಿಂದ ಹೋಗಿದ್ದ ಕಾರ್‌ನಲ್ಲಿಯೇ ಮಹೇಶನ ಕುತ್ತಿಗೆಗೆ ವೈಯರ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಮಹೇಶನ ಶವವನ್ನು ಕೊಲ್ಹಾರ ಸೇತುವೆ ಕೆಳಗೆ ಎಸೆದು ಹೋಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಹತ್ತು ಜನರನ್ನು ಬಂಧಿಸಿದ್ದಾರೆ. ಅರುಣ ಪೂಜಾರಿ, ವಿಶ್ವನಾಥ ಪೂಜಾರಿ, ಚಂದ್ರಶೇಖರ ಪೂಜಾರಿ, ನಿಲೇಶ ಪೂಜಾರಿ, ರಮೇಶ ಮಾದರ, ಅಜಯ ಬಾಳು ಚವಾಣ್, ಸಂದೀಪ, ಚಂದ್ರಶೇಖರ ಹಳ್ಳೂರ, ಸುನೀಲ ಚವಾಣ್ ಹಾಗೂ ರಾಮಗೊಂಡ ಒಳಸಂಗ ಎಂಬುವರನ್ನು ಬಂಧಿಸಲಾಗಿದೆ. ಆಸ್ತಿ ವ್ಯಾಜ್ಯಕ್ಕಾಗಿಯೇ ಮಹೇಶನನ್ನು ಕೊಲೆ ಮಾಡಲು ಅಪಹರಣಕಾರರನ್ನು ಬಳಸಿಕೊಳ್ಳಲಾಗಿದೆ ಎಂಬ ಅಂಶ ವಿಚಾರಣೆ ವೇಳೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net