ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ರ್ಟಮಿನಲ್

railway
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ( ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ಬಳಿ ಸುಮಾರು 500 ಕೋಟಿ ರೂ.ವೆಚ್ಚದಲ್ಲಿ ಮೆಗಾ ಕೋಚಿಂಗ್ ರ್ಟಮಿನಲ್ ನಿರ್ಮಾಣ ಮಾಡಲು ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ.

ಈಗಾಗಲೇ ಜಾಗ ಗುರುತಿಸಲಾಗಿದ್ದು, ಅಂತಿಮ ಸರ್ವೇ ಕೂಡ ಮುಗಿದಿದೆ ಎನ್ನಲಾಗಿದ್ದು ರೈಲ್ವೆ ಮಂಡಳಿಯೂ ಇದಕ್ಕೆ ಅನುಮೋದನೆ ನೀಡಿದೆ. ಈ ಕೇಂದ್ರವು ರೈಲ್ವೆ ಅಭಿವೃದ್ಧಿಯ ಭವಿಷ್ಯಕ್ಕೆ ನಾಂದಿಯಾಗಿದ್ದು, ಸುಮಾರು 30 ವರ್ಷಗಳ ಭವಿಷ್ಯದ ಕುರಿತು ಕೇಂದ್ರ ಸರ್ಕಾರ ದೂರದೃಷ್ಟಿಯನ್ನು ಇರಿಸಿದೆ. ಬೆಂಗಳೂರು ರೈಲು ಸಂಚಾರ ದಟ್ಟಣೆ ಕಡಿಮೆ ಮಾಡಲು ದೇವನಹಳ್ಳಿಯಲ್ಲಿ ಟರ್ಮಿನಲ್ ಸ್ಥಾಪನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ಟರ್ಮಿನಲ್ 36 ರೇಕ್‌ಗಳ ನಿರ್ವಹಣಾ ಸಾಮರ್ಥ್ಯ ಹೊಂದಿದ್ದು, ನಗರದ ರೈಲು ಮೂಲಸೌಕರ್ಯದ ದಟ್ಟಣೆ ನಿವಾರಿಸಿ, ಪ್ರಯಾಣಿಕರ ಬೇಡಿಕೆ ಪೂರೈಸಲು ನೆರವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಪ್ರಯಾಣಿಕರ ಬೇಡಿಕೆಗೆ ಸ್ಪಂದನೆ: ದೇವನಹಳ್ಳಿ ನಿಲ್ದಾಣದ ಸಮೀಪ ಅಥವಾ ಯಲಹಂಕ ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಯಾವುದೇ ಸೂಕ್ತ ಸ್ಥಳದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣದ ಉದ್ದೇಶದಿಂದ ಅಂತಿಮ ಸ್ಥಳ ಸಮೀಕ್ಷೆ ಪ್ರಾರಂಭಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಈ ಯೋಜನೆಯು ಬೆಂಗಳೂರಿನ ಗರಿಷ್ಠ ಮಟ್ಟದ ದಟ್ಟತೆ ಹೊಂದಿರುವ ರೈಲು ಮೂಲಸೌಕರ್ಯಕ್ಕೆ ಪರಿಹಾರ ಒದಗಿಸಲು ಹಾಗೂ ಹೆಚ್ಚಾಗುತ್ತಿರುವ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸುವ ಉದ್ದೇಶ ಹೊಂದಿದೆ.

ಟರ್ಮಿನಲ್‌ಗಳ ಮೇಲೆ ಒತ್ತಡ: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಸುಮಾರು 11.5 ಮಿಲಿಯನ್ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದೆ, ಪರಿಣಾಮವಾಗಿ ರೈಲು ಪ್ರಯಾಣದ ಅವಲಂಬನೆ ಹೆಚ್ಚುತ್ತಿದೆ. ನಗರದಲ್ಲಿರುವ ಕೇವಲ ಮೂರು ಟರ್ಮಿನಲ್‌ಗಳು ಮತ್ತು 12 ಪಿಟ್ ಲೈನ್‌ಗಳೊಂದಿಗೆ ಪ್ರಸ್ತುತ 140 ಆರಂಭಿಕ, 139 ಕೊನೆಗೊಳ್ಳುವ ಹಾಗೂ 142 ಪಾಸ್ ಥ್ರು ರೈಲುಗಳನ್ನು ನಿರ್ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿನಕ್ಕೆ 210 ರೈಲುಗಳವರೆಗೆ ಹೆಚ್ಚುವ ಸಾಧ್ಯತೆ ಇದೆ, ಇದರಿಂದ ಇತ್ತೀಚಿನ ಟರ್ಮಿನಲ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ಹೊಸ ಟರ್ಮಿನಲ್‌ನಲ್ಲಿ ಪೂರಕ ಸೌಲಭ್ಯಗಳು: ನಗರದ ಹೊರವಲಯದಲ್ಲಿರುವ ದೇವನಹಳ್ಳಿ ಟರ್ಮಿನಲ್ ಪ್ರಮುಖ ಟರ್ಮಿನಲ್ ಆಗಿ ಅಭಿವೃದ್ಧಿಯಾಗಲಿದೆ, ರೈಲು ಪ್ರಯಾಣದ ಹಂಚಿಕೆಯಲ್ಲಿ ಹೊಂದಾಣಿಕೆ ತರಲಿದೆ, ಆಡಳಿತ ಭವನಗಳು ಮತ್ತು ಮಳಿಗೆಗಳಂತಹ ಪೂರಕ ಸೌಲಭ್ಯಗಳು ಒಳಗೊಳ್ಳಲಿವೆ,ಪ್ರತಿದಿನ 36 ರೇಕ್‌ಗಳ ನಿರ್ವಹಣಾ ಸಾಮರ್ಥ್ಯ ಹೊಂದಿರುವ ಈ ಟರ್ಮಿನಲ್ ಬೆಂಗಳೂರು ರೈಲ್ವೆ ಜಾಲದ ನಿರ್ವಹಣಾ ಸಾಮರ್ಥ್ಯವನ್ನು ಉನ್ನತಮಟ್ಟಕ್ಕೆ ಏರಿಸಲಿದೆ. ಈ ಸಮೀಕ್ಷೆಯ ಅನುಮೋದನೆ ಮೂಲಕ ಭಾರತೀಯ ರೈಲ್ವೆ ಬೆಂಗಳೂರಿನ ಭವಿಷ್ಯಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ರೂಪಿಸುತ್ತಿದ್ದು, ನಗರ ಅಭಿವೃದ್ಧಿಗೆ ಅನುಗುಣವಾದ ಶಾಶ್ವತ ಪರಿಹಾರ ನೀಡುವ ದೃಷ್ಟಿಕೋನ ಹೊಂದಿದೆ ಎಂದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net