

ಹೊಸದುರ್ಗ: ಪುರಸಭೆಯ 2ನೇ ಅವಧಿಗೆ ಅಧ್ಯಕ್ಷೆಯಾಗಿ ರಾಜೇಶ್ವರಿ ಆನಂದ್ ಹಾಗೂ ಉಪಾಧ್ಯಕ್ಷೆಯಾಗಿ ಗೀತಾ ಆಸಂದಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಇದರೊಂದಿಗೆ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಮತ್ತೆ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಗುರುವಾರ ಆಯೋಜಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ವರಿ ಆನಂದ್ ಹಾಗೂ ಬಿಸಿಎಂ ಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಆಸಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ತಿರುಪತಿ ವಿ.ಪಾಟೀಲ್ ಅವರು ಅವಿರೋಧ ಆಯ್ಕೆ ಪ್ರಕಟಸಿದರು.
23 ಸದಸ್ಯ ಬಲ ಹೊಂದಿರುವ ಹೊಸದುರ್ಗ ಪುರಸಭೆಯಲ್ಲಿ ಬಿಜೆಪಿ 14, ಕಾಂಗ್ರೆಸ್ 4 ಹಾಗೂ ಪಕ್ಷೇತರ 5 ಸದಸ್ಯರು ಇದ್ದಾರೆ. ಕಾಂಗ್ರೆಸ್ ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರ ಹಿಡಿಯುವ ಸಾಹಸಕ್ಕೆ ಕೈ ಹಾಕದ ಹಿನ್ನೆಲೆಯಲ್ಲಿ ಬಿಜೆಪಿ ಸುಲಭವಾಗಿ ಅಧಿಕಾರ ಪಡೆಯಿತು.
ಕಾಂಗ್ರೆಸ್ ಸದಸ್ಯರು ಗೈರು: ಶಾಸಕ ಬಿ.ಜಿ.ಗೋವಿಂದಪ್ಪ ಮತದಾನದ ಹಕ್ಕು ಹೊಂದಿದ್ದರೂ ಕೂಡ ಕಾಂಗ್ರೆಸ್‌ನ ನಾಲ್ಕು ಜನ ಪುರಸಭಾ ಸದಸ್ಯರೊಂದಿಗೆ ಗೈರಾಗುವ ಮೂಲಕ ಮತದಾನದ ಪ್ರಕ್ರಿಯೆಯಿಂದ ದೂರ ಉಳಿದರು. ಬಿಜೆಪಿ ಪರವಾಗಿ ಸಂಸದ ಗೋವಿಂದ ಎಂ.ಕಾರಜೋಳ ಹಾಜರಾಗಿದ್ದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸರ್ಕಾರದ ಜವಾಬ್ದಾರಿ ಮಹತ್ತರವಾದುದು. ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ಸಂತಸ ತಂದಿದೆ. ಪ್ರತಿಯೊಬ್ಬ ಸದಸ್ಯರು ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಬೇಕು. ಸ್ಥಾಯಿ ಸಮಿತಿ ರಚಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ನಾನು ಕೂಡ ಪುರಸಭೆಯ ಶಾಶ್ವತ ಸದಸ್ಯನಾಗಿ ನಿಮ್ಮ ಜತೆ ಇರುತ್ತೇನೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸಹಕಾರದಿಂದ ಬಿಜೆಪಿ ಮತ್ತೆ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರ ಸಹಕಾರದಿಂದ ಉತ್ತಮವಾಗಿ ಆಡಳಿತ ನಡೆಸುವ ಮೂಲಕ ಪಟ್ಟಣಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಬೇಕು. ಪಟ್ಟಣದ ಜನರಿಗೆ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ತಾಲೂಕಾಧ್ಯಕ್ಷ ಗೂಳಿಹಟ್ಟಿ ಜಗದೀಶ್, ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಇತರರಿದ್ದರು.
ತಾಲೂಕಿನಲ್ಲಿ ಬಿಜೆಪಿ ಶಕ್ತಿ ಪ್ರಬಲವಾಗಿದೆ. ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಆದ್ಯತೆ ನೀಡಿ ಕಾರ್ಯಕರ್ತರ ಜತೆ ನಿಂತು ಪಕ್ಷ ಕಟ್ಟುತ್ತೇನೆ. ಮತ್ತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿಯಾಗುವ ವಿಶ್ವಾಸವಿದ್ದು, ಯಾವುದೇ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದೆ ಸಂಘಟನೆಗೆ ಆದ್ಯತೆ ನೀಡಬೇಕು.ಎಸ್.ಲಿಂಗಮೂರ್ತಿ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ