ಚಳ್ಳಕೆರೆ ನಗರಸಭೆ ಕಾಂಗ್ರೆಸ್ ತೆಕ್ಕೆಗೆ

dj clk election
Published on

ಚಳ್ಳಕೆರೆ: ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಜೈತುನ್‌ಬಿ, ಉಪಾಧ್ಯಕ್ಷೆಯಾಗಿ ಸುಜಾತಾ ಪಾಲಯ್ಯ ಆಯ್ಕೆಯಾದರು
ಗುರುವಾರ ನಡೆದ ಚುನಾವಣಾ ಪ್ರಕ್ರಿಯೆ ಬಳಿಕ ಉಪ ವಿಭಾಗಾಧಿಕಾರಿ ಕಾರ್ತಿಕ್ ಘೋಷಣೆ ಮಾಡಿದರು.

ಮೀಸಲಾತಿ ಗೊಂದಲದಿಂದ ಪಕ್ಷಗಳ ರಾಜಕೀಯ ಜಿದ್ದಾಜಿದ್ದಿ ಆಗಲಿದೆ ಎನ್ನುವ ಚುನಾವಣೆಯಲ್ಲಿ ಕಾಂಗ್ರೆಸ್ ಅಂದುಕೊಂಡಂತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಸದಸ್ಯೆ ಜೈತುನ್‌ಬಿಗೆ 18, ಬಿಜೆಪಿ ಸದಸ್ಯೆ ಸಾಕಮ್ಮ ಅವರಿಗೆ 11 ಮತ ಬೆಂಬಲ ಇದೆ ಎಂದು ಸದಸ್ಯರು ಕೈ ಎತ್ತಿದರು. ಹೆಚ್ಚಿನ ಮತಗಳನ್ನು ಪಡೆದ ಜೈತುನ್‌ಬಿ ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ 8ರ ಕಾಂಗ್ರೆಸ್ ಸದಸ್ಯೆ ಸುಜಾತಾ ಪಾಲಯ್ಯ ಏಕೈಕ ನಾಮಪತ್ರ ಸಲ್ಲಿಕೆ ಆದ ಕಾರಣ, ಅವಿರೋಧವಾಗಿ ಆಯ್ಕೆಯಾದರು.

ಮೈತ್ರಿಗೆ ಹಿನ್ನಡೆ: ನಗರಸಭೆಯಲ್ಲಿ ಜೆಡಿಎಸ್ 9, ಬಿಜೆಪಿ 4 ಸದಸ್ಯರ ಸಂಖ್ಯಾಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ 1ರ ಬಿಜೆಪಿ ಸದಸ್ಯೆ ಸಾಕಮ್ಮ ಎಂಬುವವರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ನ 15 ಸದಸ್ಯರ ಜತೆಗೆ ಪಕ್ಷೇತರ 1, ಜೆಡಿಎಸ್‌ನ ಇಬ್ಬರ ಬೆಂಬಲದಿಂದ 18 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ಪಡೆಯಿತು. ಮೈತ್ರಿ ಪಕ್ಷ ಕಾಂಗ್ರೆಸ್ ಎದುರು ಸೋಲುಂಡಿತು.

ಮೀಸಲಾತಿ ಗೊಂದಲ: ನಗರಸಭೆ ಎರಡನೇ ಅವಧಿಗೆ ಒಂದೂವರೆ ವರ್ಷಗಳ ವಿಳಂಬದ ಬಳಿಕ ಬಿಸಿಎಂ ‘ಬಿ’ ಮಹಿಳೆ ಮೀಸಲಾತಿ ಘೋಷಣೆ ಮಾಡಲಾಗಿತ್ತು. ವಾರ್ಡ್ 21ರ ಕಾಂಗ್ರೆಸ್ ಸದಸ್ಯೆ ಸಾವಿತ್ರಮ್ಮ ಅರ್ಹತೆ ಹೊಂದಿದ್ದ ಏಕೈಕ ಸದಸ್ಯೆ ಇದ್ದ ಕಾರಣ, ಅವಿರೋಧ ಆಯ್ಕೆಯಲ್ಲಿ ಅಧ್ಯಕ್ಷೆ ಪಟ್ಟ ಸಿಗಲಿದೆ ಎಂದು ಆಸೆ ಇಟ್ಟುಕೊಂಡಿದ್ದರು.

ಮೀಸಲಾತಿ ಘೋಷಣೆ ಬೆನ್ನಲ್ಲೇ 31 ಸದಸ್ಯರ ವಿಶ್ವಾಸಕ್ಕೆ ಭೇಟಿ ಮಾಡಿ ಮಾತುಕತೆ ಮಾಡಿಕೊಂಡಿದ್ದರು. ಕೊನೇ ಘಳಿಗೆಯಲ್ಲಿ ಕುಟುಂಬದ ಆಸ್ತಿ ನಿಗದಿತ ಮಿತಿಗಿಂತ ಹೆಚ್ಚಳ ಇದೆ ಎನ್ನುವ ಕಾರಣಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು.

ಅದೇ ನೋವಿನಲ್ಲಿ ಚುನಾವಣೆ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳದೆ ಹೊರ ಉಳಿದಿದ್ದರು. ಬಿಸಿಎಂ ಬಿ ಅಭ್ಯರ್ಥಿ ಸ್ಪರ್ಧೆ ಇಲ್ಲದ ಕಾರಣ, ಬಿಸಿಎಂ ಎ ವರ್ಗದ ಮುಸ್ಲಿಂ ಮಹಿಳೆ ಜೈತುನ್‌ಬಿಗೆ ಅಧ್ಯಕ್ಷೀಯ ಸ್ಥಾನ ಸುಲಭವಾಗಿ ಒಲಿದು ಬಂದಿದೆ.

ಶಾಸಕರ ಸಂಧಾನ: ಬಿಸಿಎಂ ಬಿ ಅಭ್ಯರ್ಥಿಯಾಗಿ ಸಾವಿತ್ರಮ್ಮ ಸ್ಪರ್ಧಿಸಲು ಕಾನೂನು ತೊಡಕು ಎದುರಾಗುತ್ತಿದೆ ಎಂದು ಸುದ್ದಿ ತಿಳಿದ ಕೂಡಲೇ ಬಿಸಿಎಂ ಎ ವರ್ಗದ 24ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಆರ್.ಮಂಜುಳಾ, 31ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಜೈತುನ್‌ಬಿ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗಿತ್ತು.

ಒಂದೇ ಪಕ್ಷದ ಇಬ್ಬರು ಸದಸ್ಯರು ಸ್ಫರ್ಧಿಸುವುದರಿಂದ ನಮಗೆ ಲಾಭ ದೊರೆಯಲಿದೆ ಎನ್ನುವ ಲೆಕ್ಕಚಾರಾದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳು ವಾರ್ಡ್ 1ರ ಬಿಜೆಪಿ ಸದಸ್ಯೆ ಸಾಕಮ್ಮ ಎಂಬುವರಿಂದ ನಾಮಪತ್ರ ಸಲ್ಲಿಸಿತ್ತು. ಇಂತಹ ಬೆಳವಣಿಗೆ ನಡೆಯಲಿದೆ ಎಂಬ ಮುನ್ಸೂಚನೆಯಿಂದ ಶಾಸಕ ಟಿ.ರಘುಮೂರ್ತಿ, ಕಾಂಗ್ರೆಸ್ ಸದಸ್ಯರ 15 ಸಂಖ್ಯಾಬಲಕ್ಕೆ ಜೆಡಿಎಸ್ 2, ಪಕ್ಷೇತರ ಒಬ್ಬರ ಬಲ ಗಟ್ಟಿ ಮಾಡಿಕೊಂಡು ಪಕ್ಷದಿಂದ ಒಬ್ಬರೇ ನಾಮಪತ್ರ ಸಲ್ಲಿಸುವಂತೆ ಸೂಚಿಸಿದರು.

ಉಳಿದ 14 ತಿಂಗಳ ಅವಧಿಯಲ್ಲಿ 6 ತಿಂಗಳು ಆರ್.ಮಂಜುಳಾ ಅವರಿಗೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ಭರವಸೆ ಮೂಲಕ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.

ವಾರ್ಡ್ 31ರಿಂದ ಸದಸ್ಯೆಯಾಗಿ ಆಯ್ಕೆಯಾದ 75 ವರ್ಷ ವಯಸ್ಸಿನ ಜೈತುನ್‌ಬಿ ಮೊದಲ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿ, ಒಂದು ತಿಂಗಳ ಕಾಲ ಪ್ರಭಾರ ಅಧ್ಯಕ್ಷೆಯಾಗಿ ಬಳಿಕ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ವಿಶೇಷ. ಈಕೆಯ ಪತಿ ಮಾಲೀಕ್ ಸಾಬ್ ಮಿಲ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net