ತೆರಿಗೆ ವಸೂಲಿ ಮಾಡದಿದ್ದರೆ ಮನೆಗೆ ಹೋಗಿ : ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳ ವಿರುದ್ಧ ಸಚಿವ ಎನ್.ನಾಗರಾಜು ಕಿಡಿ

01TMK_MTB_Meeting
Published on

ತುಮಕೂರು : ತೆರಿಗೆ ವಸೂಲಾತಿಯಲ್ಲಿ ಉದಾಸೀನ ತೋರಿರುವ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ವಿರುದ್ಧ ಪೌರಾಡಳಿತ ಸಚಿವ ಎನ್.ನಾಗರಾಜು (ಎಂಟಿಬಿ) ಹರಿಹಾಯ್ದರು, ಅಲ್ಲದೆ ಕರವಸೂಲಿ ಮಾಡದ ಅಧಿಕಾರಿಗಳನ್ನು ಮನೆಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹ ಕಡಿಮೆ ಇರುವ ಬಗ್ಗೆ ಕೋಪಗೊಂಡರು. ಆಸ್ತಿ, ನೀರು, ಜಾಹೀರಾತು ತೆರಿಗೆ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ಸಂಗ್ರಹ ಸೇರಿ ಎಲ್ಲ ಕರ ವಸೂಲಾತಿ ಕಾಲಮಿತಿಯೊಳಗೆ ವಸೂಲಿ ಮಾಡಬೇಕು ಎಂದರು.

ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹದಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಬಾಕಿ ಇರುವ ತೆರಿಗೆ ವಸೂಲಿ ಮಾಡಬೇಕು. ಅಲ್ಲದೆ, ವ್ಯಾಪಾರಸ್ಥರ ಪರವಾನಗಿ ಕಾಲ ಕಾಲಕ್ಕೆ ನವೀಕರಣಗೊಳಿಸಬೇಕು. ಪರವಾನಗಿ ಇಲ್ಲದೆ ವ್ಯಾಪಾರ ನಡೆಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ವಾಡದೇ ಇರುವ ಸಾರ್ವಜನಿಕರಿಗೆ ನೋಟಿಸ್ ನೀಡಬೇಕು ಎಂದು ನಿರ್ದೇಶಿಸಿದರು.

ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಆದ್ಯತೆ ಕೊಡಬೇಕು ಎಂದರು.

ಜವಾಬ್ದಾರಿ ತೆಗೆದುಕೊಳ್ಳದೆ ಉದಾಸೀನವಾಗಿ ಕೆಲಸ ವಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ ಎಂದ ಸಚಿವರು, ಮುಂದಿನ ಕೆಡಿಪಿ ಸಭೆ ಆರಂಭದಲ್ಲಿಯೇ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ವಾಡಿದರು.

ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪೌರಕಾರ್ಮಿಕರೆಲ್ಲರಿಗೂ ಕರೊನಾ ಲಸಿಕೆ ಹಾಕಿಸಬೇಕು, ಎರಡೂ ಡೋಸ್ ಲಸಿಕೆ ಪಡೆದ ಪೌರಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆಯೇ ಎಂಬ ಬಗ್ಗೆ ವಾಹಿತಿ ಪಡೆದರು.

ತಿಪಟೂರಲ್ಲಿ ತೆರಿಗೆ ಸಂಗ್ರಹಣೆ ತೃಪ್ತಿ ತಂದಿಲ್ಲ : ತಿಪಟೂರು ನಗರಸಭೆ ವ್ಯಾಪ್ತಿಯಲ್ಲಿಯೇ ತೆರಿಗೆ ಸಂಗ್ರಹಣೆ ತೃಪ್ತಿದಾಯಕವಾಗಿಲ್ಲ. ಹೀಗಾದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಗುರಿಯಂತೆ ಎಲ್ಲ ತೆರಿಗೆಗಳನ್ನು ವಸೂಲಿ ಮಾಡಬೇಕು. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಅಭಿವೃದ್ಧಿಗೊಳಿಸಬೇಕು ಎಂದು ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕಳೆದ ಒಂದೂವರೆ ವರ್ಷದಿಂದ ಬಾಡಿಗೆಯನ್ನು ನಿರ್ದಿಷ್ಟ ಪ್ರಗತಿಯಂತೆ ವಸೂಲಿ ವಾಡಿಲ್ಲವೆಂದು ಮಧುಗಿರಿ ಕಂದಾಯ ನಿರೀಕ್ಷಕ ಸಂತೋಷ್ ಅವರಿಗೆ ಎಚ್ಚರಿಕೆ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಗುರಿಯಂತೆ ತೆರಿಗೆ ವಸೂಲಿ ವಾಡದಿದ್ದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.

ಸಮರ್ಪಕ ವರದಿ ನೀಡದಿದ್ದರೆ ಕ್ರಮ : ಸಭೆಗೆ ಹಾಜರಾಗುವ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಭಿವೃದ್ಧಿ ಕುರಿತ ವಾಹಿತಿ ನೀಡಬೇಕು. ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳು ಅಭಿವೃದ್ಧಿಗೆ ಆದ್ಯತೆ ನೀಡಿಲ್ಲವೆಂದು ಪರಿಗಣಿಸಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 126257 ಆಸ್ತಿಗಳಿದ್ದು, ಹಿಂದಿನ ವರ್ಷದ 382.23 ಲಕ್ಷ ರೂ. ಹಾಗೂ ಪ್ರಸಕ್ತ ಸಾಲಿನ 1411.562 ಲಕ್ಷ ರೂ. ತೆರಿಗೆ ಸೇರಿ ಒಟ್ಟು 1793.79 ಲಕ್ಷ ರೂ. ತೆರಿಗೆ ಸಂಗ್ರಹ ವಾಡುವ ಗುರಿ ಹೊಂದಲಾಗಿದೆ. ಈ ಪೈಕಿ 830.22 ಲಕ್ಷ ರೂ. ವಸೂಲಿ ಮಾಡಲಾಗಿದ್ದು, 963.57 ಲಕ್ಷ ರೂಪಾಯಿ ಬಾಕಿಯಿದೆ ಎಂದು ಮಾಹಿತಿ ಒದಗಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net