

ಬೆಳಗಾವಿ: ನಗರದಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವ ಬಿಡಾಡಿ ದನಗಳನ್ನು ಹಿಡಿದು ಹಾಕುವುದಕ್ಕೆ ಸ್ಮಾರ್ಟ್ ಸಿಟಿ ಕಂಪನಿಯಿಂದ ನಿರ್ಮಿಸಿರುವ 'ಬಿಡಾಡಿ ದನಗಳ ಪುನರ್ವಸತಿ ಕೇಂದ್ರ (ಕ್ಯಾಟಲ್ ಶೆಲ್ಟರ್) ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಬಿಡಾಡಿ ದನಗಳನ್ನು ಹಿಡಿದು ಕ್ಯಾಟಲ್ ಶೆಲ್ಟರ್ ಗೆ ಹಾಕುವಲ್ಲಿ ಪಾಲಿಕೆ ಸಿಬ್ಬಂದಿ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಇದರಿಂದ ಕ್ಯಾಟಲ್ ಶೆಲ್ಟರ್ ಉದ್ದೇಶಿತ ಕಾರ್ಯ ಈಡೇರುತ್ತಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ 76 ಲಕ್ಷ ರೂ. ವೆಚ್ಚದಲ್ಲಿ ಶ್ರೀನಗರದ ಚನ್ನಮ್ಮ ಕಾಲನಿ ಪಕ್ಕದಲ್ಲಿ ಬಿಡಾಡಿ ದನಗಳ ಪುನರ್ವಸತಿ ಕೇಂದ್ರ ನಿರ್ಮಿಸಿ ಎರಡು ವರ್ಷಗಳ ಹಿಂದೆಯೇ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿತ್ತು. ನಗರದಲ್ಲಿ ಸಂಚರಿಸುವ ಬಿಡಾಡಿ ದನಗಳನ್ನು ಹಿಡಿದು ಈ ಕೇಂದ್ರಕ್ಕೆ ರವಾನಿಸಿ ಬಳಿಕ ದಂಡ ಹಾಕುವುದು ಹಾಗೂ ಕೇಂದ್ರ ನಿರ್ವಹಣೆಗೆ ಟೆಂಡರ್ ಕೊಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಇವ್ಯಾವುದೇ ಕಾರ್ಯಗಳು ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಸದ್ಯ ಕೇಂದ್ರದಲ್ಲಿ ರೈತನಿಗೆ ಸೇರಿದ 3-4 ದನಗಳು ಸೇರಿ 10 ದನಗಳಿವೆ. ಆ ರೈತನೇ ತಾತ್ಕಾಲಿಕವಾಗಿ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದಾನೆ.
ಮಹಾನಗರ ಪಾಲಿಕೆಗೆ ಈ ಹಿಂದೆ ಬಿಡಾಡಿ ದನಗಳನ್ನು ಹಿಡಿದಿಡಲು ನಗರದಲ್ಲಿ ಸೂಕ್ತ ವ್ಯವಸ್ಥೆ ಇರಲಿಲ್ಲ. ಸ್ಥಳೀಯ ಮಠವೊಂದರ ಗೋ ಶಾಲೆಯಲ್ಲಿ ದನಗಳನ್ನು ಇಡಲಾಗುತ್ತಿತ್ತು. ಗೋ ಶಾಲೆ ನಿರ್ವಹಣೆ ಮಾಡುವವರೇ ದಂಡದ ರೂಪದ ಹಣ ಪಡೆಯುತ್ತಿದ್ದರು, ಜತೆಗೆ ಬೇಕಾಬಿಟ್ಟಿಯಾಗಿ ದಂಡ ವಿಧಿಸುತ್ತಿದ್ದರು. ಹೀಗಾಗಿ ಬಿಡಾಡಿ ದನಗಳ ಉಪಟಳಕ್ಕೆ ಕಡಿವಾಣ ಬಿದ್ದಿರಲಿಲ್ಲ, ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲೆಂದೇ ಬಿಡಾಡಿ ದನಗಳ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ. ಆದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.
ಪುನರ್ವಸತಿ ಕೇಂದ್ರದಲ್ಲಿ ಏನೇನಿದೆ?:
ಬಿಡಾಡಿ ದನಗಳ ಪುನರ್ವಸತಿ ಕೇಂದ್ರದಲ್ಲಿ ದನಗಳು ತಂಗುವುದಕ್ಕೆ ದೊಡ್ಡ ಕೊಠಡಿ, ಮೇವು ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸಿಡುವುಕ್ಕೆ
ಪ್ರತ್ಯೇಕ ಸ್ಥಳಾವಕಾಶ, ವಾಚ್‌ಮನ್ ಕೊಠಡಿ ಇದೆ. ದನಗಳ ಸಗಣಿಯಿಂದ ಬಯೋಗ್ಯಾಸ್ ಉತ್ಪಾದನೆಗೆ ವ್ಯವಸ್ಥೆ ಮಾಡಲಾಗಿದೆ. ಬಯೋಗ್ಯಾಸ್‌ನಿಂದ 10 ಬಲ್ಸ್ಗಳು ಉರಿಯುವಷ್ಟು ವಿದ್ಯುತ್ ಉತ್ಪಾದಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಜಾನುವಾರುಗಳಿಗೆ ಮೇವು ಬೆಳೆಯುವುದಕ್ಕೆ ಕೇಂದ್ರದ ಹಿಂದೆ ಒಂದು ಎಕರೆ ಪ್ರದೇಶ ಮೀಸಲಿಡಲಾಗಿದೆ. ಆದರೆ, ಮೇವನ್ನೂ ಬೆಳೆಯುತ್ತಿಲ್ಲ. ವಿದ್ಯುತ್ ಉತ್ಪಾದನೆಯೂ ಆಗುತ್ತಿಲ್ಲ.
ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ:
ನಗರದ ವಿವಿಧೆಡೆ ರಸ್ತೆಗಳ ಮೇಲೆ ಜಾನುವಾರುಗಳನ್ನು ಬಿಡುವ ಮಾಲೀಕರ
ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳು ಮಾರ್ಗಸೂಚಿ ತಯಾರಿಸಿದ್ದರು. ಯಾವ ಕಾರ್ಯಗಳೂ ನಡೆಯುತ್ತಿಲ್ಲ. ಟೆಂಡರ್ ಕರೆದು ಕ್ಯಾಟಲ್ ಶೆಲ್ಡರ್ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಈ ಮೊದಲು ಪಾಲಿಕೆ ಅಧಿಕಾರಿಗಳು ನಿಯಮ ರೂಪಿಸಿಕೊಂಡಿದ್ದರು. ಖಾಸಗಿಯವರು ಯಾರೂ ಭಾಗವಹಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಈಗ ಎನ್ ಜಿಒ ಒಬ್ಬರು ಸ್ವಂತ ಆಸಕ್ತಿಯಿಂದ ಮುಂದೆ ಬಂದು ಕ್ಯಾಟಲ್ ಶೆಟ್ಟರ್ ಮುನ್ನಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
-ಎನ್‌ಜಿಒ ಸ್ವ ಆಸಕ್ತಿಯಿಂದ ಕ್ಯಾಟಲ್ ಶೆಲ್ಟರ್ ನಿರ್ವಹಿಸುತ್ತಿದೆ. ನಗರದಲ್ಲಿ ಬಿಡಾಡಿ ದನಗಳನ್ನು ಹಿಡಿದು ಹಾಕುವುದಕ್ಕೆ ಪಾಲಿಕೆಯಿಂದ ತಂಡ ರಚಿಸಿ, ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಸಂಜೀವ್ ನಾಂದ್ರೆ ಪ್ರತಿಕ್ರಿಯಿಸಿದ್ದಾರೆ.