

ವಿಜಯವಾಣಿ ಸುದ್ದಿಜಾಲ ತುಮಕೂರು
ತುಮಕೂರು&ಬೆಂಗಳೂರು ನಡುವೆ ಪ್ರತಿನಿತ್ಯ ರೈಲಿನಲ್ಲಿ ಓಡುತ್ತಿದ್ದ ಸಮಾನಮನಸ್ಕ ಪ್ರಯಾಣಿಕರನ್ನೊಳಗೊಂಡ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಗೆ ಈಗ ದಶಮಾನೋತ್ಸವ ಸಂಭ್ರಮ.
ಅ.13ರಂದು ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ ಎಂದು ನಗರದಲ್ಲಿ ಬುಧವಾರ ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭವನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಜಿಲ್ಲೆಯ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳೊಂದಿಗೆ ವೇದಿಕೆ ಚರ್ಚಿಸಿ ಜಿಲ್ಲೆಯಲ್ಲಿ ಆಗಬೇಕಿರುವ ರೈಲ್ವೆ ಯೋಜನೆಗಳ ಬಗ್ಗೆ ಸಿದ್ಧಪಡಿಸಿರುವ ಕಿರು ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಬಿಡುಗಡೆಗೊಳಿಸುವರು. ದಶಮಾನೋತ್ಸವದ ಸವಿನೆನಪಿಗೆ ಬರಿ ರೈಲಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಹೊಂದಿರುವ "ನಮ್ಮ ರೈಲು' ಸ್ಮರಣ ಸಂಚಿಕೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಿಡುಗಡೆ ಮಾಡುವರು. ರೈಲಿಗೆ ಸಂಬಂಧಿಸಿದ ಬಹುತೇಕ ಎಲ್ಲ ಮಾಹಿತಿಯನ್ನು ಒಳಗೊಂಡಿರುವ ಈ ಸಂಚಿಕೆ ಸಂಗ್ರಹಯೋಗ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ಜಯಪ್ರಕಾಶ್ ವಹಿಸಲಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್. ಆರ್.ಶ್ರೀನಿವಾಸ್, ಜಿಲ್ಲೆಯ ಸಂಸದರು, ಶಾಸಕರು, ಎಂಎಲ್ಸಿ ಉಪಸ್ಥಿತರಿರುವರು. ಮಾಜಿ ಸಂಸದರಾದ ಜಿ.ಎಸ್.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಎಸ್.ರಫೀಕ್ ಅಹಮದ್ ಮತ್ತು ನೈಋತ್ಯ ರೈಲ್ವೆ ಚೀಫ್ ಕಮರ್ಷಿಯಲ್ ಮ್ಯಾನೇಜರ್ ಡಾ.ಅನೂಪ್ ದಯಾನಂದ್ ಸಾಧುರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳಲ್ಲಿ ರೈಲಿನ ಬಗ್ಗೆ ಆಸಕ್ತಿ ಹೆಚ್ಚಿಸಲು ದಶಮಾನೋತ್ಸವದ ಅಂಗವಾಗಿ ತುಮಕೂರು ನಗರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗಿರುವ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು. ಅಲ್ಲದೆ, 2023-&24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ರೈಲ್ವೆ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುವುದು ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ಜಯಪ್ರಕಾಶ್, ಉಪಾಧ್ಯಕ್ಷರಾದ ಪರಮೇಶ್, ಮಾಧವ ಮೂರ್ತಿ, ಖಜಾಂಚಿ ಆರ್.ಬಾಲಾಜಿ, ನಿರ್ದೇಶಕರಾದ ಸಿ.ನಾಗರಾಜ್, ರವಿಶಂಕರ್ ಹಾಜರಿದ್ದರು.